ಕೊಪ್ಪಳ: ಹಾಲಿ ಸಂಸದ ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಮುನಿಸಿಕೊಂಡಿದ್ದು, ಬಿಜೆಪಿ ರಾಜ್ಯ ನಾಯಕರಿಗೆ ಮೂರು ಸವಾಲುಗಳನ್ನ ಹಾಕಿದ್ದಾರೆ. ಅವರ ಆ ಪ್ರಶ್ನೆಗೆ ಉತ್ತರ ಸಿಕ್ಕಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.
ಕೊಪ್ಪಳದ ಗಿಣಿಗೇರಿಯಲ್ಲಿ ನಿರ್ಮಿಸಿದ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ನಾನು ರಾಜಕೀಯವಾಗಿ ನಿವೃತ್ತಿ ಆಗುವುದಿಲ್ಲ. ಹಾಗಂತ ಬಿಜೆಪಿ ಬಿಟ್ಟು ನಾನು ಎಲ್ಲಿಗೆ ಹೋಗುವುದಿಲ್ಲ. ರಾಜಕೀಯವಾಗಿ ಮಾಡಬೇಕಾದ ಕೆಲಸಗಳು ಸಾಕಷ್ಟು ಇವೆ. ನನಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಸಾಕಷ್ಟು ನೋವಾಗಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಡಾ ಕೆ ಬಸವರಾಜ್ ಪರ ಪ್ರಚಾರಕ್ಕೆ ಹೋಗುವ ಮುನ್ನ ಮೊದಲು ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅವರ ಮೊದಲ ಪ್ರಶ್ನೆ ನನಗೆ ರಾಜ್ಯ ಹೈಕಮಾಂಡ್ ಈ ವರೆಗೆ ಯಾಕೆ ಕರೆ ಮಾಡಿಲ್ಲ ? ನನಗೆ ಟಿಕೆಟ್ ಮಿಸ್ ಮಾಡಿಸಲು ಕಾರಣ ಯಾರು? ನನಗೆ ಟಿಕೆಟ್ ಮಿಸ್ ಮಾಡಿಸುವ ಉದ್ದೇಶವೇನು ? ನನ್ನ ಈ ಮೂರು ಪ್ರಶ್ನೆಗಳಿಗೆ ಉತ್ತರ ಕೊಟ್ಟ ಮರುಕ್ಷಣವೇ ನಾನು ಪ್ರಚಾರಕ್ಕೆ ತೆರಳುವುದಾಗಿ ಎಂದು ತಿಳಿಸಿದರು.
ನೀರಾವರಿ ಕನಸು ಹೊತ್ತು ಬಿಜೆಪಿ ಸೇರಿದ್ದೆ: ನಾನು ಬಿಜೆಪಿಗೆ ಬಂದಿದ್ದೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸಲೆಂದು ಆದರೆ ಇನ್ನೂ ಆ ಯೋಜನೆ ಪೂರ್ಣಗೊಳ್ಳುವ ಮೊದಲೇ ಅಧಿಕಾರದ ಅವಧಿ ಮುಗಿದಿದೆ. ನಮ್ಮಲ್ಲಿ ಪ್ರಭಾವಿ ನಾಯಕರಿದ್ದು, ಕಾಲೆಳೆಯುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹತ್ತು ವರ್ಷದಲ್ಲಿ 8 ಕ್ಷೇತ್ರದ ಜನರು ಅಭಿನಂದಿಸಿದ್ದಾರೆ. 65 ವರ್ಷದಲ್ಲಿ ಕಾಣದಿರುವ ಅಭಿವೃದ್ಧಿ ಹಾಗೂ ಈಗಿನ ಹತ್ತು ವರ್ಷಗಳಲ್ಲಿ ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ದಿ ನೋಡಬೇಕು. ನಮ್ಮೆಲ್ಲರ ನಾಯಕ ನರೇಂದ್ರ ಮೋದಿ ಅವರನ್ನು ವಿಶ್ವ ಗೌರವಿಸುತ್ತಿದೆ ಎಂದು ಪ್ರಧಾನಿಯನ್ನ ಹೊಗಳಿದರು.
ಮಹಬೂಬನಗರ ರೈಲ್ವೆ ಕಾಮಗಾರಿಗೆ 900 ಕೋಟಿ ಮಂಜೂರು :ಜನ ಸಾಮಾನ್ಯರಿಗೆ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಭಾರತ ಜಗತ್ತಿನಲ್ಲಿ ಮೊದಲು ಸ್ಥಾನದಲ್ಲಿದೆ. ಇಂಥ ಅಭಿವೃದ್ಧಿಗೆ ಜನರ ಸ್ಪಂದಿಸಬೇಕು. ಮಹಬೂಬನಗರ ರೈಲ್ವೆ ಕಾಮಗಾರಿಗೆ 900 ಕೋಟಿ ಮಂಜೂರಾಗಿದೆ. ಇನ್ನೂ ಎರಡು ವರ್ಷದಲ್ಲಿ ರಾಯಚೂರುವರೆಗೆ ರೈಲ್ವೆ ಓಡುತ್ತದೆ. ಕರ್ನಾಟಕದ 32 ಯೋಜನೆಗಳು ಕೇಂದ್ರ ಸರಕಾರ ಪೆಂಡಿಂಗ್ ಇಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಅವುಗಳು ಅನುಷ್ಠಾನ ಆಗಬಹುದು. ಮುಂದಿನ ಸಂಸದರು ಆಸಕ್ತಿ ವಹಿಸಿ ಆ ಎಲ್ಲ ಕೆಲಸಗಳನ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಈಶ್ವರಪ್ಪನವರು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾರೆ ಎನ್ನುವ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ