ಬೆಂಗಳೂರು: ''ಕಾಂಗ್ರೆಸ್‌ನವರು ಶ್ರೀರಾಮನ ವಿರುದ್ಧ ಇದ್ದಾರೆ ಎಂದು ಅಪಪ್ರಚಾರ ಮಾಡುವುದನ್ನು ನಾವು ಖಂಡಿಸುತ್ತೇವೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಮಮಂದಿರವನ್ನು ರಾಜಕೀಯಗೊಳಿಸಬಾರದು. ಶ್ರೀರಾಮಚಂದ್ರ ಎಲ್ಲರ ದೇವರು. ಕೇವಲ ಬಿಜೆಪಿಯವರ ದೇವರಲ್ಲ, ಎಲ್ಲಾ ಹಿಂದೂಗಳ ದೇವರು. ನಾವೂ ಶ್ರೀರಾಮಚಂದ್ರನ ಭಕ್ತರೇ. ಶ್ರೀರಾಮಚಂದ್ರನಿಗೆ ವಿರುದ್ಧವಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಹೀಗೆ ಅಪಪ್ರಚಾರ ಮಾಡುವುದು ಸರಿಯಲ್ಲ'' ಎಂದರು.
ಬಿಜೆಪಿಯಿಂದ ರಾಮನನ್ನು ಬೇರ್ಪಡಿಸುವ ಪ್ರಯತ್ನ: ಶ್ರೀರಾಮ ಟೆಂಪಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀರಾಮ ದೇವಸ್ಥಾನ ಹಾಗು ಆಂಜನೇಯನ ವಿಗ್ರಹವನ್ನೂ ಉದ್ಘಾಟಿಸಿದ್ದೇನೆ. ಇದನ್ನು ನಾವು ರಾಜಕಾರಣಕ್ಕಾಗಿ ಮಾಡಿಲ್ಲ. ಕರ್ನಾಟಕದಲ್ಲಿ ಶ್ರೀರಾಮಚಂದ್ರನ ಬಹಳಷ್ಟು ದೇವಸ್ಥಾನಗಳಿವೆ. ನಮ್ಮೂರಿನಲ್ಲಿಯೂ ನಾನೇ ಶ್ರೀರಾಮಚಂದ್ರನ ದೇವಸ್ಥಾನವನ್ನು ಕಟ್ಟಿಸಿದ್ದೇನೆ. ಸಮಯ ದೊರೆತಾಗ ಅಯೋಧ್ಯೆಗೆ ನಾನು ಹೋಗುತ್ತೇನೆ. ಶ್ರೀರಾಮಚಂದ್ರನ ಮೂರ್ತಿ ಎಲ್ಲೆಡೆ ಒಂದೇ. ಅಯೋಧ್ಯೆಯಲ್ಲಿ ಮಾಡಿದರೂ ಒಂದೇ, ನಮ್ಮೂರಿನಲ್ಲಿ ಪೂಜೆ ಮಾಡಿದರೂ ಒಂದೇ. ಬಿಜೆಪಿಯವರು ಅಯೋಧ್ಯೆಯಲ್ಲಿ ರಾಮನನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನನ್ನು ಬೇರ್ಪಡಿಸಲಾಗುವುದಿಲ್ಲ. ಶ್ರೀರಾಮಚಂದ್ರನ ಜೊತೆಗೆ ಸೀತಾದೇವಿ, ಲಕ್ಷ್ಮಣ, ಆಂಜನೇಯ ಇದ್ದಾಗ ಮಾತ್ರ ಪರಿಪೂರ್ಣವಾಗುತ್ತದೆ. ಇವರು ಶ್ರೀರಾಮಚಂದ್ರನನ್ನೇ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ'' ಎಂದು ಅಭಿಪ್ರಾಯಪಟ್ಟರು.
ಮಹಾತ್ಮಾ ಗಾಂಧಿ ಹೇಳಿದ ರಾಮನನ್ನು ಪೂಜಿಸುತ್ತೇವೆ: ''ಮಹಾತ್ಮಾ ಗಾಂಧೀಜಿ ರಘುಪತಿ ರಾಘವ ರಾಜಾರಾಮ್ ಎಂದು ಭಜಿಸುತ್ತಿದ್ದರು. ಸಾಯುವಾಗಲೂ ಹೇ ರಾಮ್ ಎಂದೇ ಜೀವ ಬಿಟ್ಟರು. ಕಾಂಗ್ರೆಸ್ ಮಹಾತ್ಮಾ ಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ರಾಮನನ್ನು ಅಲ್ಲ'' ಎಂದರು.
ಅನೇಕ ರಾಜ್ಯಗಳು ರಜೆ ಘೋಷಿಸಿಲ್ಲ: ಕರ್ನಾಟಕದಲ್ಲಿ ಕಾರ್ಯಕ್ರಮದ ಅಂಗವಾಗಿ ರಜೆ ಘೋಷಣೆ ಮಾಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ''ಕೇಂದ್ರ ಸರ್ಕಾರ ಅರ್ಧ ದಿನ ರಜೆ ಕೊಟ್ಟಿದ್ದಾರೆ. ದೆಹಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳದಲ್ಲಿಯೂ ರಜೆ ನೀಡಿಲ್ಲ'' ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವೀರಪ್ಪನವರ ಅಧ್ಯಕ್ಷತೆಯ ಏಕಸದಸ್ಯ ಆಯೋಗ ತನಿಖೆ ಮಾಡಿ ಇಂದು ವರದಿ ಸಲ್ಲಿಸಿದ್ದಾರೆ. ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ; ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ಪ್ರಧಾನಿಯಿಂದ ಹೊಸ ಘೋಷಣೆ