ಬೆಂಗಳೂರು: ಪೆನ್ ಡ್ರೈವ್ ವಿಚಾರದಲ್ಲಿ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿಯಲಿ. ಹಿಡಿದು, ಬಡಿದು ಅವರೇ ನುಂಗಿಕೊಳ್ಳಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅವರಿಗೆ ಯಾರನ್ನು ಹಿಡಿದು ಬಡಿದು ಒಳಗೆ ಹಾಕಬೇಕು ಅನ್ನಿಸುತ್ತದೋ ಅವರನ್ನು ಒಳಗೆ ಹಾಕಿಸಲಿ. ತಿಮಿಂಗಿಲುಗಳನ್ನು ಅವರೇ ನುಂಗಿಕೊಳ್ಳಲಿ. ನಾನು ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ. ನಾನು ಕೇವಲ ಪ್ರದರ್ಶಕ ಅಷ್ಟೇ ಎಂದರು.
ನನ್ನ ಹಸ್ತಕ್ಷೇಪವಿದ್ದರೆ ಬೆಲೆ ತೆರಲು ಸಿದ್ಧ: ಶಾಸಕರು, ಸಚಿವರಿಂದ ಮಾತನಾಡಿಸುತ್ತಿರುವವರು ಯಾರು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಬೇರೆಯವರಿಂದ ಮಾತನಾಡಿಸುವ, ಪ್ರತಿಭಟನೆ ಮಾಡಿಸುವ, ಬೇರೆಯವರ ಮೇಲೆ ಅನಗತ್ಯ ಆರೋಪ ಮಾಡುವ ಅಗತ್ಯ ನನಗಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದೇನೆ. ಅಲ್ಲದೇ ನಾನು ಒಂದು ರಾಜಕೀಯ ಪಕ್ಷದ ಅಧ್ಯಕ್ಷ. ಈ ಪ್ರಕರಣದಲ್ಲಿ ಒಂದು ಸಣ್ಣ ಹಸ್ತಕ್ಷೇಪವಿದ್ದರೂ ಅದಕ್ಕೆ ಬೆಲೆ ತೆರಲು ನಾನು ಸಿದ್ಧ. ಈಗ ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಡಿಕೆಶಿ ಹೇಳಿದ್ರು.
ರೇವಣ್ಣ ಸ್ಥಿತಿ ನೋಡಿ ಬೇಸರವಾಗುತ್ತದೆ: ರೇವಣ್ಣ ಅವರ ಪರಿಸ್ಥಿತಿ ನೋಡಿ ನನಗೂ ಬೇಸರವಾಗುತ್ತಿದೆ. ಅವರದು ದೊಡ್ಡ ಕುಟುಂಬ, ಈ ರೀತಿ ಆಗಬಾರದು ಎಂದು ಬಯಸುತ್ತೇನೆ. ಅವರು ನನಗೆ ಏನಾದಲೂ ಬಯಸಲಿ. ಆದರೆ, ನಾನು ಮಾತ್ರ ಅವರಿಗೆ ಕೆಟ್ಟದ್ದು ಬಯಸುವುದಿಲ್ಲ. ನಾನು ಪ್ರಕೃತಿ ನಿಯಮ, ನ್ಯಾಯದ ಮೇಲೆ ನಂಬಿಕೆ ಇಟ್ಟವನು. ನಾನು ರಾಜಕೀಯ ಷಡ್ಯಂತ್ರಕ್ಕೆ ಗುರಿ ಆಗಿದ್ದವನೇ ಮತ್ತು ಅದರ ನೋವು ಅನುಭವಿಸಿದವನೇ. ಆ ವೇಳೆಯಲ್ಲಿ ನಾನು ಎಷ್ಟು ಗಟ್ಟಿಯಾಗಿ, ಧೈರ್ಯವಾಗಿ, ಆತ್ಮವಿಶ್ವಾಸದಿಂದ ಇದ್ದೆ ಎಂಬುದು ನನಗೆ ಮಾತ್ರ ಗೊತ್ತಿದೆ. ದೇವರು ನನಗೆ ಎಲ್ಲಾ ರೀತಿಯ ರಕ್ಷಣೆ ನೀಡಿದ್ದು, ನಾನು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಆದರೆ, ನನ್ನ ಬ್ರದರ್ ಕುಮಾರಣ್ಣನಿಗೆ ವಿಧಾನಸಭೆಯಲ್ಲಿ ಉತ್ತರ ನೀಡುತ್ತೇನೆ ಎಂದು ಡಿಸಿಎಂ ಹೇಳಿದ್ರು.
ಇದನ್ನೂ ಓದಿ: ರೇವಣ್ಣ ಬಂಧನ ರಾಜಕೀಯ ಪ್ರೇರಿತ; ಹೆಚ್.ಡಿ. ಕುಮಾರಸ್ವಾಮಿ - HD Kumaraswamy