ಮಂಗಳೂರು (ದಕ್ಷಿಣ ಕನ್ನಡ): ಪ್ರಧಾನಿ ನರೇಂದ್ರ ಮೋದಿ ಎದುರಲ್ಲಿ ಚುನಾವಣೆಗೆ ನಿಲ್ಲುತ್ತಿಲ್ಲ. ಬ್ರಜೇಶ್ ಚೌಟ ಎದುರು ಸ್ಪರ್ಧಿಸುತ್ತಿದ್ದೇನೆ. ಇಲ್ಲಿ ನಾನು ಮೋದಿ ಅವರನ್ನು ಎದುರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ತಿಳಿಸಿದ್ದಾರೆ. ಮೋದಿ ಅಲೆ ಬಗ್ಗೆ ಪ್ರಶ್ನೆ ಎದುರಾದಾಗ ಈ ರೀತಿ ಉತ್ತರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆ ಬಳಿಕ ಶುಕ್ರವಾರ ಮಂಗಳೂರಿಗೆ ಆಗಮಿಸಿದ ಅವರು, ಬಡವರ ಏಳಿಗೆಗಾಗಿ ಹಗಲಿರುಳು ದುಡಿಯುವ ಪಕ್ಷ ಕಾಂಗ್ರೆಸ್. ಕಳೆದ ವರ್ಷ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಕಳೆದ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗೆ ವಿಪಕ್ಷಗಳು ಅಪಹಾಸ್ಯ ಮಾಡಿದವು. ಅದನ್ನು ಕಸದಬುಟ್ಟಿಗೆ ಹಾಕಿ ಎಂದರು. ಗ್ಯಾರಂಟಿಯಿಂದ ಇಂದು ಸಿದ್ದರಾಮಯ್ಯ ಸರ್ಕಾರ ಪ್ರತಿ ಮನೆಗೆ 5 ರಿಂದ 7 ಸಾವಿರ ರೂ.ವರೆಗೆ ನೀಡುತ್ತಿದೆ. ಇದರಿಂದ ಕುಟುಂಬದ ಅನ್ಯೋನ್ಯತೆ ಹೆಚ್ಚಿದೆ. ಇದು ಕಾಂಗ್ರೆಸ್ನಿಂದ ಸಾಧ್ಯವಾಗಿದೆ. ಇದನ್ನು ಇಟ್ಟುಕೊಂಡು ಮನೆಮನೆಗೆ ಹೋಗುತ್ತೇವೆ. ನಮ್ಮ ಗ್ಯಾರಂಟಿಯ ಫಲಾನುಭವಿಗಳು ಇದ್ದಾರೆ. ದೇವರು ಮೆಚ್ಚುವ ಕೆಲಸವನ್ನು ಮಾಡಿದ್ದೇವೆ. ಇದನ್ನು ಯಾರೂ ಮರೆಯುವುದಿಲ್ಲ ಎಂದು ತಿಳಿಸಿದರು.
ನಮ್ಮ ಧರ್ಮಕ್ಕೆ ಗೌರವ ಕೊಡುತ್ತಾ ಇನ್ನೊಂದು ಧರ್ಮವನ್ನೂ ಗೌರವಿಸುತ್ತಾ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಕಾಂಗ್ರೆಸ್ನ ಸಂಸದರಾಗಿದ್ದ ಶ್ರೀನಿವಾಸ ಮಲ್ಯ, ಜನಾರ್ದನ ಪೂಜಾರಿ, ಕೆ.ಕೆ ಶೆಟ್ಟಿಯವರು ತಂದ ಯೋಜನೆಗಳು ಮಂಗಳೂರಿಗೆ ಬಂದಿವೆ. 1991ರಿಂದ ಬಂದ ಬಿಜೆಪಿ ಸಂಸದರು ಯಾವುದಾದರೂ ಯೋಜನೆಯನ್ನು ಮಾಡಿದ್ದನ್ನು ಎದೆತಟ್ಟಿ ಹೇಳಲು ಸಾಧ್ಯವೇ. ಪ್ರತಿ ಬಾರಿ ಕ್ಯಾಂಡಿಡೇಟ್ ಬದಲಾಯಿಸಿ ಅವರು ಕೆಲಸ ಮಾಡಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಲೋಕಸಮರದಲ್ಲಿ ಕಣಕ್ಕಿಳಿಯಲಿದ್ದಾರಾ ಬಾಲಿವುಡ್ ನಟ ಗೋವಿಂದ? - Bollywood Actor Govinda
ಬಿಜೆಪಿ ಜನರನ್ನು ಭಾವನಾತ್ಮಾಕವಾಗಿ ಯಾಮಾರಿಸುತ್ತಿದ್ದಾರೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮುಂದೆ ಹೋಗುವ. ಈ ಬಾರಿ ನಮ್ಮನ್ನು ಜನ ಕೈ ಹಿಡಿಯುತ್ತಾರೆ ಎಂಬ ಧೈರ್ಯ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಂಗಳೂರು: ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ಕಾಳಿಂಗ ಸರ್ಪ - King Cobra Escapes
ನಿಮ್ಮ ಸಮುದಾಯ ಈ ಚುನಾವಣೆಗೆ ಸಹಕಾರಿಯಾಗಲಿದೆಯೇ ಎಂಬ ಪ್ರಶ್ನೆ ಎದುರಾದಾಗ, ಭಾರತದಲ್ಲಿ ವೈವಿಧ್ಯತೆ ಇದೆ. ವಿವಿಧ ಜಾತಿ ಧರ್ಮಗಳಿವೆ. ಯಾರೂ ಕೂಡಾ ಇದೇ ಜಾತಿ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟಿದವರಲ್ಲ. ಸಂಪ್ರದಾಯದಂತೆ ಬಂದಿದ್ದೇವೆ. ನಮ್ಮ ಧರ್ಮಕ್ಕೆ ಗೌರವ ಕೊಡುತ್ತಾ ಇನ್ನೊಂದು ಧರ್ಮವನ್ನೂ ಗೌರವಿಸಿದರೆ ಅದು ಮಾನವ ಧರ್ಮ. ಅದರೊಟ್ಟಿಗೆ ಮುಂದೆ ಸಾಗುತ್ತೇವೆ ಎಂದು ಸ್ಪಷಪಡಿಸಿದರು.