ಮಂಗಳೂರು: ಪಕ್ಷದ ಸೂಚನೆಯಂತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಜಿತನಾಗಿದ್ದೇನೆ. ಆದ್ದರಿಂದ ಈ ಬಾರಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ಪಕ್ಷದ ವರಿಷ್ಠರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ಕ್ಷೇತ್ರಗಳಲ್ಲಿ ಕೆಲವು ಸಚಿವರುಗಳು ಸ್ಪರ್ಧಿಸಿದರೆ ಲಾಭವಾಗುತ್ತದೆ ಅನ್ನುವ ಅಭಿಪ್ರಾಯ ಕಾರ್ಯಕರ್ತರು, ಮುಖಂಡರು ವ್ಯಕ್ತಪಡಿಸಿದ್ದಾರೆ ಎಂದರು.
ಯಾರು ಸ್ಪರ್ಧಿಸಬೇಕು ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸಂಪುಟದಲ್ಲಿರುವ ಸಚಿವರುಗಳು ಸ್ಪರ್ಧೆ ಮಾಡಬೇಕೋ, ಬೇಡವೋ ಎನ್ನುವುದನ್ನು ಸಿಎಂ ನಿರ್ಧರಿಸುತ್ತಾರೆ. ಎರಡೂ ಬಾರಿ ನನಗೆ ಮನಸ್ಸಿಲ್ಲದಿದ್ದರೂ ಪಕ್ಷದ ಸೂಚನೆ ಮೇರೆಗೆ ಸ್ಪರ್ಧಿಸಿದ್ದೇನೆ. ಪದೇ ಪದೆ ಈ ರೀತಿ ಒತ್ತಡ ಹೇರುವುದು ಸರಿಯಲ್ಲ. ಈಗಾಗಲೇ ಎಐಸಿಸಿ ಪ್ರತಿನಿಧಿಗಳಿಗೂ ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಹಾಗೂ ಕೆಫೆ ಬಾಂಬ್ ಪ್ರಕರಣದ ತನಿಖೆಯ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಎಲ್ಲ ವಿಚಾರವನ್ನು ರಾಜಕೀಯಗೊಳಿಸುತ್ತಿದೆ. ಬಿಜೆಪಿಯವರು ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ವಾಸ್ತವಾಂಶ, ತನಿಖೆಯ ಆಧಾರದಲ್ಲಿ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಈ ಘಟನೆಗಳು ಬಿಜೆಪಿಗೆ ಚುನಾವಣಾ ವಿಷಯವಾಗಬಹುದು. ಆದರೆ ನಮಗೆ ದೇಶದಲ್ಲಿ ಬೆಲೆ ಏರಿಕೆ , ನಿರುದ್ಯೋಗವೇ ಮುಂದಿನ ಚುನಾವಣೆಯ ವಿಚಾರ ಎಂದರು.
ಇದನ್ನೂ ಓದಿ: ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಯಾರಾಗ್ತಾರೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು?