ದಾವಣಗೆರೆ: ಬಿಜೆಪಿ ಮರು ಸೇರ್ಪಡೆಯ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾನುವಾರ ದಾವಣಗೆರೆಗೆ ಆಗಮಿಸಿದರು. ತವರು ಕ್ಷೇತ್ರ ಹುಬ್ಬಳ್ಳಿಗೆ ಹೋಗುವ ಸಂದರ್ಭದಲ್ಲಿ ಅವರು ಇಲ್ಲಿನ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟರು. ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದರು. ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಎಂ.ಪಿ.ರೇಣುಕಾಚಾರ್ಯ ಸಾಥ್ ನೀಡಿದರು.
ಕಾರ್ಯಕರ್ತರು ಹಾಗು ಮುಖಂಡರನ್ನು ಭೇಟಿಯಾದ ಬಳಿಕ ಮಾತನಾಡಿದ ಶೆಟ್ಟರ್, ''ನಮ್ಮ ಮನೆಗೆ ಮರಳಿ ಬಂದಿರುವುದು ಖುಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕು. ಈ ಕಾರಣಕ್ಕೆ ಬಿಜೆಪಿಯೊಂದಿಗೆ ಕೈ ಜೋಡಿಸಿ ಮೋದಿ ಕೈ ಬಲಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಮರಳಿದ್ದೇನೆ'' ಎಂದರು. "ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಮರಳುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ನನ್ನ ಸಂಪರ್ಕದಲ್ಲಿಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ''ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆಯನ್ನು ಸ್ವಾಗತಿಸುತ್ತೇನೆ'' ಎಂದರು.
ಇದನ್ನೂ ಓದಿ: ಸರ್ಕಾರಿ ಜಾಗದಲ್ಲಿ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ: ಸಚಿವ ಚಲುವರಾಯಸ್ವಾಮಿ