ಹಾವೇರಿ:ಲೋಕಸಭಾ ಬಿಜೆಪಿ ಟಿಕೆಟ್ ಪಡೆಯುವಲ್ಲಿ ನಮ್ಮಲ್ಲಿ ಗೊಂದಲ ಇಲ್ಲ ಎಂದು ಹಾವೇರಿ ಲೋಕಸಭಾ ಬಿಜೆಪಿ ಟಿಕೆಟ್ ಅಕಾಂಕ್ಷಿ ಕೆ ಈ ಕಾಂತೇಶ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೇಳೋದು ಎಲ್ಲರ ಹಕ್ಕು, ಅದಕ್ಕೆ ಬೇರೆಯವರು ಕೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ. ಹೈಕಮಾಂಡ್ ನಿರ್ಧರಿಸಿ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರ ಎಲ್ಲರೂ ಕೂಡಿ ಕೆಲಸ ಮಾಡುವುದು ಮೊದಲಿನಿಂದಲೂ ಇದೆ. ಇವತ್ತು ದೆಹಲಿಯಲ್ಲಿ ಸಿಇಸಿ ಮೀಟಿಂಗ್ ಇದ್ದು, ಖಂಡಿತವಾಗಿ ನಾನು ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ ಎಂದು ಕಾಂತೇಶ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬ ಅಭಿಲಾಷೆಯಿಂದ ಸಿಂದಗಿ ಶಾಂತವೀರೇಶ್ವರ ಗದ್ದುಗೆಗೆ ವಿಶೇಷ ಪೂಜೆ ಮಾಡಿದ್ದೇವೆ. ಹಾವೇರಿಯಿಂದ ಬಿಜೆಪಿ ಟಿಕೆಟ್ ಸಿಗದೇ ಹೋದರೆ ಎಂಬ ಪ್ರಶ್ನೆಯೇ ಇಲ್ಲ, ನೂರಕ್ಕೆ ನೂರು ಟಿಕೆಟ್ ಸಿಗುವ ವಿಶ್ವಾಸ ನನಗೆ ಇದೆ. ಯಾವುದೇ ಕಾರಣಕ್ಕೂ ನನಗೆ ಅನ್ಯಾಯ ಆಗಲ್ಲ. ಈಶ್ವರಪ್ಪನವರು ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದಾರೆ. ಸಿಇಸಿ ಮೀಟಿಂಗ್ ಮುಗಿದ ಬಳಿಕ ಖಂಡಿತವಾಗಿ ಸಿಹಿ ಸುದ್ದಿ ಸಿಗುತ್ತೆ. ಲೋಕಸಭಾ ಕ್ಯಾಂಡಿಡೇಟ್ ನಾನೇ ಆಗ್ತೀನಿ ಅನ್ನೋ ವಿಶ್ವಾಸ ಇದೆ ಎಂದು ಕಾಂತೇಶ ವಿಶ್ವಾಸ ವ್ಯಕ್ತಪಡಿಸಿದರು.
ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗೂಡಿ ಕೆಲಸ ಮಾಡ್ತೇವಿ: ಇದು ಕೇವಲ ಹಾವೇರಿಯಲ್ಲಷ್ಟೇ ಅಲ್ಲ, ಈ ಸಿಚುವೇಶನ್ ಎಲ್ಲ ಕಡೆಯೂ ಇದೆ. ಹಾವೇರಿ ಲೋಕಸಭೆಗೆ ಬಸವರಾಜ ಬೊಮ್ಮಾಯಿ , ಬಿ ಸಿ ಪಾಟೀಲ್ ಹೆಸರು ಫಿಕ್ಸ್ ಆದರೂ ನಾವು ಓಡಾಡಿ ಕೆಲಸ ಮಾಡುತ್ತೇವೆ. ನಾನು ಸ್ಥಳೀಯವನೇ ಇದ್ದೇನೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಚನ್ನಬಸಪ್ಪ ಅವರನ್ನು ಗೆಲ್ಲಿಸಿದ್ದೇವೆ. ನಾನೂ ಒಬ್ಬ ಸಾಮಾನ್ಯ ಕಾರ್ಯಕರ್ತ
ಯಾರಿಗೆ ಕೊಟ್ಟರೂ ಸಂತೋಷದಿಂದ ಕೆಲಸ ಮಾಡುತ್ತೇವೆ. ಬಿ ಸಿ ಪಾಟೀಲ್ ತ್ಯಾಗದ ವಿಚಾರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿ ಈ ಮಟ್ಟಕ್ಕೆ ಬರೋದಕ್ಕೆ ಅನೇಕ ಹಿರಿಯರ ತಪಸ್ಸು ಮಾಡಿದ್ದಾರೆ. ಎಷ್ಟೋ ಜನ ಪ್ರಚಾರಕರು ದೇಶ ,ಪಕ್ಷಕ್ಕಾಗಿ ಮನೆ ಬಿಟ್ಟು, ಮದುವೆ ಆಗದೇ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಇದಕ್ಕೊ ಮೊದಲು ಕಾಂತೇಶ್ ಸಿಂದಗಿ ಶಾಂತವೀರೇಶ್ವರ ಗದ್ದುಗೆ ದರ್ಶನ ಪಡೆದರು. ನಂತರ ಕೆ.ಈ. ಕಾಂತೇಶ್ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಟಿಕೆಟ್ ಅಕಾಂಕ್ಷಿ ಕೆ ಈ ಕಾಂತೇಶ್ ಅವರು ರಾಜಕೀಯ ಕ್ಷೇತ್ರದಲ್ಲಿ ಒಳಿತು, ಅಡೆತಡೆ ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂಓದಿ:ನಮ್ಮ ಗ್ಯಾರಂಟಿ ಹೀಯಾಳಿಸುತ್ತಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಹೊಗಳುತ್ತಿದ್ದಾರೆ: ಮಧು ಬಂಗಾರಪ್ಪ