ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಹೈದರಾಬಾದ್ ಮೂಲದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ - ಆಪರೇಟಿವ್ ಸೊಸೈಟಿಯ (FFCCSL) ಅಧ್ಯಕ್ಷ ಇ. ಸತ್ಯನಾರಾಯಣ್ ಎಂಬುವರನ್ನು ಮಂಗಳವಾರ ಬಂಧಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಎಫ್ಎಫ್ಸಿಸಿಎಲ್ನ 18 ಖಾತೆಗಳಿಗೆ ಸುಮಾರು 94.73 ಕೋಟಿ ರೂ. ಜಮೆ ಆಗಿರುವ ಸಂಗತಿಯನ್ನು ಪತ್ತೆ ಹಚ್ಚಿರುವ ಎಸ್ಐಟಿ ಅಧಿಕಾರಿಗಳು ಅದರ ಅಧ್ಯಕ್ಷ ಸತ್ಯನಾರಾಯಣ್ರನ್ನು ಬಂಧಿಸಿದ್ದಾರೆ. ಹೈದರಾಬಾದ್‌ನ ಸತ್ಯನಾರಾಯಣ್ ಹಣ ಅಕ್ರಮ ವರ್ಗಾವಣೆ ಕೃತ್ಯದಲ್ಲಿ ಭಾಗಿಯಾಗಿರುವುದರ ಕುರಿತು ಪುರಾವೆಗಳು ಲಭ್ಯವಾಗಿರುವುದರಿಂದ ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆಯಲು ಎಸ್ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
2013ರಲ್ಲಿ ಸ್ಥಾಪನೆಯಾಗಿರುವ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ - ಆಪರೇಟಿವ್ ಸೊಸೈಟಿಯು ತೆಲಂಗಾಣದಲ್ಲಿ ಸುಮಾರು 7,000 ಗ್ರಾಹಕರನ್ನು ಹೊಂದಿದ್ದು, 13 ಶಾಖೆಗಳಿವೆ.
ಇದನ್ನೂ ಓದಿ: ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ: ಸಿಬಿಐನಿಂದ ಎಫ್ಐಆರ್ ದಾಖಲು - Valmiki Corporation case