ನೆಲಮಂಗಲ: ಭೂ ಸ್ವಾಧೀನಕ್ಕೆ ಒಳಗಾಗಿದ್ದ ಜಮೀನಿಗೆ 2 ಕೋಟಿಗೂ ಹೆಚ್ಚು ಹಣ ಪರಿಹಾರ ರೂಪದಲ್ಲಿ ಬಂದಿತ್ತು, ಈ ಹಣವನ್ನು ತವರು ಮನೆಗೆ ಕಳುಹಿಸಿದ್ದಾಳೆಂದು ಕುಪಿತಗೊಂಡ ಗಂಡ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಜಯಲಕ್ಷ್ಮಿ(36) ಕೊಲೆಯಾದ ಪತ್ನಿ. ಹತ್ಯೆ ಆರೋಪಿ ಪತಿ ಶ್ರೀನಿವಾಸ್ನನ್ನ ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ದಾಬಸ್ ಪೇಟೆ ಕೈಗಾರಿಕಾ ಪ್ರದೇಶಕ್ಕಾಗಿ ಶ್ರೀನಿವಾಸ್ ಅವರ 1 ಎಕರೆ ಜಮೀನು ಭೂ ಸ್ವಾಧೀನಕ್ಕೆ ಒಳಗಾಗಿತ್ತು, ಪರಿಹಾರವಾಗಿ 2 ಕೋಟಿಗೂ ಹೆಚ್ಚು ಹಣ ಶ್ರೀನಿವಾಸ್ ಕುಟುಂಬಕ್ಕೆ ಬಂದಿತ್ತು. ಇದರಲ್ಲಿ ಬಹುಪಾಲು ಹಣವನ್ನ ಹೆಂಡತಿ ತವರು ಮನೆಗೆ ಕಳುಹಿಸಿದ್ದಾಳೆ ಎಂಬುದು ಗಂಡ ಶ್ರೀನಿವಾಸನ ಆರೋಪವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ನಿತ್ಯ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು, ಕುಡಿದ ನಶೆಯಲ್ಲಿದ್ದ ಗಂಡ ಜಗಳದ ಆವೇಶದಲ್ಲಿ ಮಚ್ಚಿನಿಂದ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ರಾತ್ರಿ ಶವವನ್ನು ಹೂತುಹಾಕಲು ಶ್ರೀನಿವಾಸ್ ಗುಂಡಿ ತೆಗೆಯುವಾಗ ಮಕ್ಕಳು ನೋಡಿದ್ದಾರೆ. ನಾನೇ ಕೊಂದಿರುವುದ್ದಾಗಿ ಶ್ರೀನಿವಾಸ್ ತನ್ನ ಮಕ್ಕಳಿಗೆ ಹೇಳಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಮಕ್ಕಳು ತಾಯಿ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಮೃತಳ ತವರು ಮನೆಯವರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ, ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ - Crime News