ಚಾಮರಾಜನಗರ: ಹನೂರು ತಾಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 28 ದಿನಗಳ ಅವಧಿಯಲ್ಲಿ 1.82 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಈ ಕುರಿತು ಮಾಹಿತಿ ನೀಡಿದ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು, ''ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ದೇವರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 7.40 ಗಂಟೆಯವರೆಗೂ ಜರುಗಿತು. 28 ದಿನಗಳ ಅವಧಿಯಲ್ಲಿ 1,82,33,071 ರೂಪಾಯಿ ಹುಂಡಿ ಸಂಗ್ರಹವಾಗಿದೆ'' ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಮಾವಾಸ್ಯೆ ಹಾಗೂ ರಜಾದಿನಗಳಲ್ಲೂ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಹರಕೆಯ ರೂಪದಲ್ಲಿ ಹಣ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಹುಂಡಿಗಳ ಎಣಿಕೆಯಲ್ಲಿ ಈ 41 ಗ್ರಾಂ ಚಿನ್ನ, 1,200 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದಲ್ಲದೆ, ಯುಎಸ್ಎ 3 ಡಾಲರ್, 5 ಪೌಂಡ್ಸ್ ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. ಜೊತೆಗೆ ಚಲಾವಣೆಯಿಲ್ಲದ ಎರಡು ಸಾವಿರ ಮುಖಬೆಲೆಯ 14 ನೋಟುಗಳನ್ನು ಭಕ್ತರು ದೇವರ ಹುಂಡಿ ಹಾಕಿದ್ದಾರೆ.
ಇದನ್ನೂ ಓದಿ: ದೇವರಬೆಳಕೆರೆ ಮೈಲಾರಲಿಂಗೇಶ್ವರ ಜಾತ್ರೆ: ಸರಪಳಿ ಪವಾಡ ಕಣ್ತುಂಬಿಕೊಂಡ ಭಕ್ತರು