ಬೆಂಗಳೂರು: ದೂರುದಾರನ ಮೇಲೆ ಅನಗತ್ಯವಾಗಿ ಸಬ್ ಇನ್ಸ್ಪೆಕ್ಟರ್ವೋರ್ವರು ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪ ಸಂಬಂಧ ತನಿಖೆ ನಡೆಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ, ದೂರುದಾರನಿಗೆ ಒಂದು ತಿಂಗಳೊಳಗಾಗಿ 2 ಲಕ್ಷ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
2 ಲಕ್ಷ ಹಣ ಪರಿಹಾರ ರೂಪದಲ್ಲಿ ನೀಡಬೇಕೆಂದು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಮಾಡಿರುವ ಆಯೋಗವು, ತಪ್ಪಿತಸ್ಥ ಪಿಎಸ್ಐ ವಿರುದ್ಧ ಇಲಾಖಾ ತನಿಖೆ ನಡೆಸಿದ ಬಳಿಕ ಪರಿಹಾರ ರೂಪದಲ್ಲಿ ನೀಡಲಾಗುವ ಈ ಹಣವನ್ನು ವೇತನದಿಂದ ವಸೂಲಿ ಮಾಡಬೇಕೆಂದು ಹೇಳಿದೆ. ಇಲಾಖೆ ವಿಚಾರಣೆ ನಡೆಸಿದ ಬಳಿಕ ಅನುಪಾಲನಾ ವರದಿಯನ್ನು ಒಂದು ತಿಂಗಳೊಳಗೆ ಸಲ್ಲಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.
2021ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ ಸತೀಶ್ ಕೆ.ಟಿ. ಎಂಬವರು ಪ್ರಕರಣವೊಂದರಲ್ಲಿ ಸುನೀಲ್ ಎಂಬ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದರು. ಈ ವೇಳೆ ಜೋಲಿ ಮೊಹಲ್ಲಾ ನಿವಾಸಿಯಾಗಿರುವ ಸುನೀಲ್ ಕುಮಾರ್ ಎಂಬವರನ್ನೇ ತಾನು ಹುಡುಕುತ್ತಿರುವ ವ್ಯಕ್ತಿಯೆಂದು ತಪ್ಪಾಗಿ ಭಾವಿಸಿದ್ದ ಪಿಎಸ್ಐ, ಆತ ಕೆಲಸ ಮಾಡುತ್ತಿದ್ದ ಪಾರ್ಸೆಲ್ ಕಚೇರಿಗೆ ಇಬ್ಬರು ಕಾನ್ಸ್ಟೆಬಲ್ರೊಂದಿಗೆ ಹೋಗಿ ಆತನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಬಳಿಕ ತಾನು ಶೋಧಿಸುತ್ತಿರುವ ವ್ಯಕ್ತಿ ಈತನಲ್ಲ ಎಂಬುದು ನಂತರ ಅರಿವಾಗಿತ್ತು. ಇದಾದ ನಂತರ ಸುಖಾಸುಮ್ಮನೆ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಸುನೀಲ್ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಆಯೋಗ ನೋಟಿಸ್ ನೀಡಿ ಸಬ್ ಇನ್ಸ್ಪೆಕ್ಟರ್ನನ್ನು ವಿಚಾರಣೆಗೊಳಪಡಿಸಿತ್ತು. ತನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿರುವುದಾಗಿ ಪಿಎಸ್ಐ ಸತೀಶ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಮತ್ತೊಂದೆಡೆ, ತಮ್ಮ ಮೇಲೆ ಹಲ್ಲೆ ನಡೆಸಿರುವ ಸಂಬಂಧ ವೈದ್ಯಕೀಯ ಚಿಕಿತ್ಸೆ ದಾಖಲಾತಿಯನ್ನು ಆಯೋಗಕ್ಕೆ ನೀಡಿದ್ದರು. ಪರಿಶೀಲಿಸಿದಾಗ ಹಲ್ಲೆಯಾಗಿರುವ ಬಗ್ಗೆ ವೈದ್ಯರ ವರದಿಯಲ್ಲಿ ದೃಢಪಟ್ಟಿತ್ತು. ತಮ್ಮ ಮೇಲೆ ಬಂದಿರುವ ಆರೋಪ ಸಂಬಂಧ ಲಿಖಿತ ಹೇಳಿಕೆ ಹೊರತುಪಡಿಸಿ, ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪಿಎಸ್ಐ ವಿಫಲರಾಗಿದ್ದರು.
ದೂರುದಾರರ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೆ ಸುನೀಲ್ ಎಂಬವರನ್ನು ದೂರುದಾರನೆಂದು ಭಾವಿಸಿ, ಅವರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸುವ ಮೂಲಕ ಮಾನವ ಹಕ್ಕು ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಪೊಲೀಸ್ ಇಲಾಖೆ ಇರುವುದು ಸಾರ್ವಜನಿಕರ ರಕ್ಷಣೆಗಾಗಿಯೇ ಹೊರತು, ಅನಗತ್ಯವಾಗಿ ಶಿಕ್ಷಿಸುವುದಕ್ಕಲ್ಲ ಎಂದು ಆಯೋಗ ಅಭಿಪ್ರಾಯಪಟ್ಟು, ತನಿಖಾ ವರದಿಯಲ್ಲಿ ಸರ್ಕಾರಕ್ಕೆ ಕೈಗೊಳ್ಳಬೇಕಾದ ಶಿಫಾರಸುಗಳನ್ನು ಸಲ್ಲಿಸಿರುವುದಾಗಿ ಆಯೋಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಬಾಲಕನ ಮೇಲೆ 42 ವರ್ಷದ ವ್ಯಕ್ತಿಯಿಂದ ಹಲ್ಲೆ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ