ವಿಜಯಪುರ: ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿದ ಹಿನ್ನೆಲೆ, ದೇವರಹಿಪ್ಪರಗಿಯಲ್ಲಿ ರೈತನ ಜೀವನಕ್ಕೆ ಆಸರೆಯಾಗಿದ್ದ ಬೃಹತ್ ಬಾವಿಯೊಂದು ಜಲಸಮಾಧಿಯಾದ ಘಟನೆ ನಡೆದಿದೆ. ದೇವರಹಿಪ್ಪರಗಿ ಗ್ರಾಮದ ರೈತ ಸಿದ್ದಪ್ಪ ಭೋಜಪ್ಪ ಸರಬಡಗಿ ಎನ್ನುವವರ ಬಾವಿ ಗೋಡೆ ಕುಸಿದಿದ್ದು, ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರಿಸುಮಾರು 60 ಲಕ್ಷ ರೂಪಾಯಿ ಸಾಲ ಮಾಡಿ ತಮ್ಮ ಜಮೀನಿನಲ್ಲಿ ಕೊರೆಸಿದ್ದ ಬಾವಿ ಇದಾಗಿತ್ತು. ಬಾವಿ ಸುತ್ತಲೂ ಬೃಹತ್ ಕಲ್ಲಿನ ಗೋಡೆ ನಿರ್ಮಿಸಿದ್ದರು. ಅಲ್ಲದೇ ಈ ಬಾವಿ ನೀರಿನ ಆಸರೆಯಿಂದ ತಮ್ಮ 14 ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆ ಮಾಡಿಸಿದ್ದರು. ಇದೀಗ ಜಮೀನಿನಲ್ಲಿ ಸುರಿದ ಭಾರಿ ಮಳೆ ಪರಿಣಾಮ, ಆ ಬಾವಿಯ ಗೋಡೆ ಸಂಪೂರ್ಣ ಕುಸಿದು ಬಿದ್ದು, ಜಲಸಮಾಧಿ ಆದಂತಾಗಿದೆ. ಇದರಿಂದಾಗಿ ರೈತ ಸಿದ್ದಪ್ಪ ಭೋಜಪ್ಪ ಸರಬಡಗಿ ಚಿಂತೆಗೀಡಾಗಿದ್ದಾರೆ.
110 ಅಡಿ ಆಳದ ಬಾವಿ ಸುತ್ತಲೂ 45 ಅಡಿ ಕಲ್ಲಿನ ಗೋಡೆಯನ್ನು ಕಟ್ಟಿಸಿದ್ದರು. ಬಾವಿಯೊಳಗಿದ್ದ 7.5 ಹೆಚ್.ಪಿ ಸಾಮರ್ಥ್ಯದ 2 ಮೋಟಾರುಗಳು ಸಹ ನೀರು ಪಾಲಾಗಿವೆ. ಬಾವಿ ಕುಸಿದಿರೋ ಹಿನ್ನೆಲೆ ಮುಂದೆ ಕೃಷಿಗೆ ನೀರು ಪೂರೈಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಸರ್ಕಾರ ಸೂಕ್ತ ಪರಿಹಾರ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Watch.. ರಾಷ್ಟ್ರ ರಾಜಧಾನಿಯಲ್ಲಿ ನೀರಿಗೆ ಹಾಹಾಕಾರ: ಟ್ಯಾಂಕರ್ ಬಳಿ ಸರತಿ ಸಾಲಿನಲ್ಲಿ ನಿಂತ ಜನರು - Delhi Water Crisis