ಬೆಂಗಳೂರು: ಹಿಂದಿನ ಹಣಕಾಸು ಆಯೋಗ ಮಾಡಿದ್ದ ಶಿಫಾರಸುಗಳಿಂದ ಕರ್ನಾಟಕ ಭಾರೀ ನಷ್ಟ ಅನುಭವಿಸಬೇಕಾಗಿದೆ. ಇದನ್ನು 16 ನೇ ಹಣಕಾಸು ಆಯೋಗದ ಮುಂದೆ ಪ್ರಶ್ನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಎಂ ಎಸ್ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಆರ್ಥಿಕ ಸಂಯುಕ್ತ ತತ್ವ, 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
14ನೇ ಹಣಕಾಸು ಆಯೋಗದಡಿ ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆ ಶೇ.4.713ರಿಂದ ಶೇ.3.647ಕ್ಕೆ 15ನೇ ಹಣಕಾಸು ಆಯೋಗ ಮಾಡಿದ ಶಿಫಾರಸಿನಿಂದಾಗಿ ಇಳಿದಿದೆ. ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅತ್ಯಂತ ದೊಡ್ಡ ಮೊತ್ತ ಅಂದರೆ ಶೇ.1.066 ರಷ್ಟು ಇಳಿಕೆಯಾಗಿದೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ರೂ.6,21,131ಗಿಂತ ಹೆಚ್ಚು ತಲಾ ಆದಾಯ ಮಟ್ಟ ಕಾಣಬಹುದಾಗಿದೆ. ಆದರೆ ಈ ವ್ಯವಸ್ಥೆ ಕರ್ನಾಟಕಕ್ಕೆ ಕೆಲವು ಜಿಲ್ಲೆಗಳಲ್ಲಿ ಅತ್ಯಲ್ಪ ತಲಾ ಆದಾಯದ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಸಂಪನ್ಮೂಲ ವರ್ಗಾವಣೆ ಮಾಡುವುದರಿಂದ ವಂಚಿತವಾಗಿಸಿದೆ. ಅಂತಾರಾಜ್ಯ ತಲಾ ಆದಾಯ ವ್ಯತ್ಯಾಸಗಳಿಗೆ ಹಣಕಾಸು ಆಯೋಗಗಳು ಅಗತ್ಯವಿರುವ ಹೊಂದಾಣಿಕೆ ಮಾಡಿಕೊಂಡು ಶಿಫಾರಸುಗಳನ್ನು ಮಾಡುವಾಗ ಆದಾಯ ದೂರವ್ಯಾಪ್ತಿಯನ್ನು ಪರಿಗಣಿಸಬೇಕು ಎಂದು ತಿಳಿಸಿದರು.
ಅತಿಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ಸಿಗದ ಅನುದಾನದ ಪ್ರತಿಫಲ: ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕಂತೆ ಅನುದಾನದ ಪ್ರತಿಫಲ ದೊರಕದಿರುವುದು ವಿಪರ್ಯಾಸ. 16ನೇ ಹಣಕಾಸು ಆಯೋಗ ದಕ್ಷತೆಗೆ ಪ್ರೋತ್ಸಾಹಕಗಳನ್ನು ಹಾಗೂ ವಿತ್ತೀಯ ಕಾರ್ಯಕ್ಷಮತೆಗೆ ನೀಡುವ ಬೆಲೆ ಹೆಚ್ಚಿಸುವಂತೆ 16ನೇ ಹಣಕಾಸು ಆಯೋಗವನ್ನು ನಾವು ಒತ್ತಾಯಿಸುತ್ತೇವೆ. ಅತ್ಯುತ್ತಮ ವಿತ್ತೀಯ ಕಾರ್ಯಕ್ಷಮತೆ ಹೊಂದಿರುವ ರಾಜ್ಯ ಎಂದು ದಾಖಲೆ ಹೊಂದಿರುವ ರಾಜ್ಯಕ್ಕೆ ಅದರ ದಕ್ಷತೆಗಾಗಿ ಯಾವುದೇ ಪ್ರೋತ್ಸಾಹಕಗಳು ದೊರೆಯುತ್ತಿಲ್ಲ.
ಕರ್ನಾಟಕದ ವಿತ್ತೀಯ ಕಾರ್ಯಕ್ಷಮತೆ ಗಮನಾರ್ಹವಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಘೋಷಿಸಿದ ಮೊದಲ ರಾಜ್ಯವೆಂದು ಹೆಗ್ಗಳಿಕೆ ಪಡೆದಿದೆ. ಕೋವಿಡ್ ನಂತರದಲ್ಲಿ ರಾಜಸ್ವ ಕೊರತೆಗಳು ಮರುಕಳಿಸಿದ್ದನ್ನು ಹೊರತುಪಡಿಸಿ ಭಾರಿ ಗಾತ್ರದ ವಿತ್ತೀಯ ಸೂಚಕಗಳಾದ ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ ಸದಾ ನಿಗದಿತ ವ್ಯಾಪ್ತಿಯಲ್ಲಿ ಇವೆ ಎಂದು ವಿವರಿಸಿದರು.
ಒಂದು ಟ್ರಿಲಿಯನ್ ಡಾಲರ್ ಜಿಎಸ್ ಡಿಪಿ : ಆರ್ಥಿಕ ಬೆಳವಣಿಗೆಯನ್ನು ಸಮತೋಲಿತ ಹಾಗೂ ಒಳಗೊಳ್ಳುವಿಕೆಯನ್ನು ಖಾತ್ರಿ ಪಡಿಸಿ ಅದನ್ನು ಸುಸ್ಥಿರಗೊಳಿಸಲು ರಾಜ್ಯದ ಮುಂದೆ ಅನೇಕ ಸವಾಲುಗಳಿವೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ಆಯವ್ಯಯ ಪರಿಣಾಮಗಳನ್ನು ರಾಜ್ಯ ಸರಿದೂಗಿಸಬೇಕಾಗಿದೆ.
ರಾಜ್ಯದ ಆರ್ಥಿಕ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಮಾನವ ಮತ್ತು ಭೌತಿಕ ಮೂಲಸೌಲಭ್ಯಗಳ ಮೇಲೆ ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಕರ್ನಾಟಕ ತನ್ನ ಸ್ವಂತ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರದರ್ಶನ ಸಾಧಿಸಿದ್ದರೂ, ರಾಜ್ಯದ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಹಾಗೂ 2032ರ ವೇಳೆಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಜಿಎಸ್ ಡಿಪಿ ಸಾಧಿಸಲು ನಮ್ಮಲ್ಲಿರುವ ಸಂಪನ್ಮೂಲಗಳು ಸಾಕಾಗುತ್ತಿಲ್ಲ ಎಂದು ವಿವರಿಸಿದರು.
ಬೆಂಗಳೂರು ನಗರದಿಂದ ಗಣನೀಯ ಆದಾಯ :ನಗರೀಕರಣ, ನಗರ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳು ಹಾಗೂ ಮೂಲಸೇವೆಗಳ ಪೂರೈಕೆಯಾಗಬೇಕಿದೆ. ಆದರೆ, ಹೆಚ್ಚುತ್ತಿರುವ ವಲಸೆಯ ಸಮಸ್ಯೆ ನಗರ ಕೇಂದ್ರಗಳಲ್ಲಿ ಒತ್ತಡ ಹೆಚ್ಚಿಸುತ್ತಿದೆ. ನಗರಗಳು, ಒಂದು ರಾಜ್ಯದ ಅಭಿವೃದ್ಧಿಯ ಕೇಂದ್ರಗಳು, ಅದರಲ್ಲಿ ಬೆಂಗಳೂರಿನಂತಹ ನಗರಕ್ಕೆ ಮೂಲಸೌಕರ್ಯದ ವೃದ್ಧಿ ಅತ್ಯವಶ್ಯವಾಗಿದೆ. ರಾಜ್ಯದ ಆದಾಯದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಸುಸ್ಥಿರ ಬೆಳವಣಿಗೆಗೆ ಸೂಕ್ತ ಸಹಕಾರ ನೀಡುವುದು ರಾಜ್ಯದ ಆದ್ಯತೆಯಾಗಿದೆ ಎಂದರು.
ಪ್ರಾದೇಶಿಕ ಅಸಮತೋಲನ: ಸಬಲೀಕೃತ ಸಮಿತಿಗಳ ಅಂದಾಜು ಬಳಸಿ ಮಾಡುವ ಒಟ್ಟು ಪ್ರಯತ್ನದ ಹೊರತಾಗಿಯೂ ರಾಜ್ಯ ಸತತವಾದ ಪ್ರಾದೇಶಿಕ ಅಸಮತೋಲನವನ್ನು ಎದುರಿಸುತ್ತಿದೆ. 2022-23ರ ಆರ್ಥಿಕ ಸಮೀಕ್ಷೆಯ ಪ್ರಕಾರ, 6,21,131 ರೂ ತಲಾ ಆದಾಯವನ್ನು ಹೊಂದಿರುವ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ. 1,24,998 ರೂ.ಗಳ ತಲಾ ಆದಾಯವನ್ನು ಹೊಂದಿರುವ ಕಲಬುರಗಿ ಕೊನೆಯ ಸ್ಥಾನದಲ್ಲಿದೆ.
ಬೆಂಗಳೂರು ನಗರದ ಮಾನವ ಅಭಿವೃದ್ಧಿ ಸೂಚ್ಯಂಕ 0.738 ಪಡೆದು ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ, ಕಲಬುರಗಿ ಮತ್ತು ರಾಯಚೂರು 0.538, 0.539 ಹಾಗೂ 0.562 ಅನುಕ್ರಮವಾಗಿ ಮಾನವ ಅಭಿವೃದ್ಧಿ ಸೂಚ್ಯಂಕ ಪಡೆದು ಕೊನೆಯ ಮೂರು ಸ್ಥಾನಗಳಲ್ಲಿದೆ. ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಸಾಧಿಸಲು ರಾಜ್ಯದ ಶ್ರಮಕ್ಕೆ ಪೂರಕವಾಗಿ ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವೂ ಇದೆ ಎಂದು ಮಾಹಿತಿ ನೀಡಿದರು.
ಇದನ್ನೂಓದಿ:ರಾಜಕೀಯ ಮಾಡ್ತಿದ್ದಾರೆ ಅದಕ್ಕೆ ನಾನು ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತಿಲ್ಲ: ಸಿಎಂ