ಬೆಂಗಳೂರು: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಹಾಗೂ ಉದ್ಯೋಗಕಾಂಕ್ಷಿಗಳಲ್ಲಿ ವೃತ್ತಿ ಕೌಶಲ್ಯ ವೃದ್ಧಿಸಿ ಉದ್ಯಮಶೀಲತೆ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಫೆಬ್ರವರಿ 26 ಹಾಗೂ 27ರಂದು ಅರಮನೆ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ - 2024 ಹಮ್ಮಿಕೊಂಡಿದೆ.
ಉದ್ಯೋಗಮೇಳದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ವಿವರ ನೀಡಿದ ಇಲಾಖೆಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಎರಡು ದಿನಗಳ ಕಾಲ ನಡೆಯುವ ಉದ್ಯೋಗ ಮೇಳಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ 31 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆ ಒಂದೇ ದಿನದಲ್ಲಿ 10 ಸಾವಿರ ಜನರು ನೋಂದಾಯಿಸಿಕೊಂಡಿದ್ದರು. ಮೇಳಕ್ಕೆ ಐದು ದಿನ ಬಾಕಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವ ಸಾಧ್ಯತೆಯಿದೆ ಎಂದರು.
ಮೇಳದಲ್ಲಿ 502 ಕಂಪನಿಗಳು ಭಾಗಿಯಾಗಲಿದ್ದು, ಸುಮಾರು 1 ಲಕ್ಷ ಮಂದಿಗೆ ಉದ್ಯೋಗ ನೀಡಲಿದೆ. ಅರಮನೆ ಮೈದಾನದಲ್ಲಿ 600 ಸ್ಟಾಲ್ ಹಾಕಲಾಗುತ್ತಿದೆ. ಒಟ್ಟು 150 ಕೇಂದ್ರಗಳಲ್ಲಿ ಅಭ್ಯರ್ಥಿಗಳ ನೋಂದಣಿ ಆಗಲಿದೆ. ಈ ಪೈಕಿ ವಿಶೇಷಚೇತನರಿಗಾಗಿ ಪ್ರತ್ಯೇಕ 5 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉದ್ಯೋಗದಾತರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮೇಳದಲ್ಲಿ ಭಾಗಿಯಾಗಲು ಶುಲ್ಕ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಉದ್ಯೋಗ ಮೇಳಕ್ಕೆ ಬರುವ ಉದ್ಯೋಗಾಂಕ್ಷಿಗಳು ಎರಡು ದಿನಗಳ ಕಾಲ ಉಚಿತ ಊಟವಿರಲಿದೆ. ಮೇಳಕ್ಕೆ ಕರೆತರಲು ಮೆಜೆಸ್ಟಿಕ್, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಹೆಚ್ಚುವರಿ ಬಸ್ ಕಲ್ಪಿಸಲಾಗಿದೆ. ಅರಮನೆ ಮೈದಾನ ಹಾಗೂ ಜಯಮಹಲ್ ಮೂಲಕ ಎರಡು ಕಡೆ ಪ್ರವೇಶದ್ವಾರಗಳಿರಲಿವೆ. ಫನ್ ವರ್ಲ್ಡ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಿಂದ 4584, ಧಾರವಾಡದ 3142, ಬಾಗಲಕೋಟೆಯ 1500, ಕಲಬುರಗಿಯ 1331 ಹಾಗೂ ಬೆಳಗಾವಿಯ 1200 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 31 ಸಾವಿರ ಮಂದಿ ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿದ್ದಾರೆ. ಉದ್ಯೋಗ ಮೇಳ ಸಂಬಂಧ https://udyogamela.skill connect.kaushalkar.com ಪ್ರತ್ಯೇಕ ಪೋರ್ಟಲ್ ತೆರೆಯಲಾಗಿದೆ. ಅಧಿಕೃತ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 18005999918 ಸಂಪರ್ಕಿಸಬಹುದಾಗಿದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಯುವನಿಧಿಗೆ 1.32 ಲಕ್ಷ ನೋಂದಣಿ: ಉದ್ಯೋಗಾಕಾಂಕ್ಷಿಗಳಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಲು ರಾಜ್ಯದಲ್ಲಿ ನಿರುದ್ಯೋಗ ಇನ್ನಿಲ್ಲವಾಗಿಸಲು ರಾಜ್ಯಮಟ್ಟದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಯೋಜಿಸುವ ಚಿಂತನೆ ಇದೆ. 5ನೇ ಗ್ಯಾರಂಟಿಯಾಗಿರುವ ಯುವನಿಧಿಗೆ ಈಗಾಗಲೇ 1.32 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 22 ಸಾವಿರ ನಿರುದ್ಯೋಗಿಗಳಿಗೆ ಹಣ ಜಮೆ ಮಾಡಲಾಗುತ್ತಿದೆ. ಫಲಿತಾಂಶ ಬಂದ ದಿನದಿಂದ ಆರು ತಿಂಗಳ ಬಳಿಕ ಯೋಜನೆಯ ಫಲಾನುಭವಿಯಾಗಲು ಸಾಧ್ಯವಾಗಲಿದೆ ಎಂದರು.
ಮೇಳದಲ್ಲಿ ಭಾಗಿಯಾಗುವ ಎಲ್ಲ ಉದ್ಯೋಗಾಂಕ್ಷಿಗಳ ಹೆಸರು ಹಾಗೂ ಇನ್ನಿತರ ಮಾಹಿತಿ ದತ್ತಾಂಶ ಸಂಗ್ರಹಿಸಲಾಗುವುದು. ಮೇಳದಲ್ಲಿ ಉದ್ಯೋಗ ದೊರೆಯದಿದ್ದಲ್ಲಿ ಅವರಲ್ಲಿರುವ ನ್ಯೂನತೆ ಹೋಗಲಾಡಿಸಿ, ಕೌಶಲ್ಯ ವೃದ್ಧಿಗೊಳಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ತರಬೇತಿ ನೀಡಿ ಸಂಬಂಧಿತ ಕಂಪನಿಗಳಲ್ಲಿ ಪ್ಲೇಸ್ಮೆಂಟ್ ನೀಡಲಾಗುವುದು ಎಂದು ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದರು.
ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಬರೀ ಹೆಸರಿಗಷ್ಟೇ: ಐಟಿ - ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಯುವಕರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿನ ರಾಜ್ಯದಲ್ಲಿ ಉದ್ಯಮಶೀಲತೆಯನ್ನ ಹೆಚ್ಚಿಸುವುದೇ ಉದ್ಯೋಗ ಮೇಳದ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆಯಂತೆ ಈವರೆಗೂ 20 ಕೋಟಿ ಜನರಿಗೆ ಉದ್ಯೋಗ ನೀಡಬೇಕಿತ್ತು ಎಂದು ಟೀಕಿಸಿದರು.
ಉದ್ಯೋಗ ನೀಡುವ ಬದಲು 12 ಕೋಟಿ ಮಂದಿಯ ಕೆಲಸ ಕಸಿದುಕೊಂಡಿದ್ದಾರೆ ಎಂಬುದು ಸಂಸ್ಥೆಯೊಂದರ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಕೇವಲ ಹೆಸರಿಗಷ್ಟೇ ಇದೆ. ಸ್ಕಿಲ್ ಇಂಡಿಯಾದಡಿ ಶೇ.17ರಷ್ಟು ಮಾತ್ರ ಉದ್ಯೋಗ ಕಲ್ಪಿಸಲಾಗಿದೆ. 2030ರ ವೇಳೆಗೆ ಕೆಲಸ ಮಾಡುವವರ ಸಂಖ್ಯೆ ಶೇ.68.9ರಷ್ಟಾಗಿದೆ. ಹೀಗಾಗಿ ಈಗಿನಿಂದಲೇ ಮಾನವ ಸಂಪನ್ಮೂಲ ಹೆಚ್ಚಿಸಲು ಉದ್ಯಮಶೀಲತೆಯತ್ತ ಗಮನ ವಹಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: 'ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ' ಆದೇಶದಲ್ಲಿ ಪ್ರಿಂಟ್ ಮಿಸ್ಟೇಕ್ ಆಗಿತ್ತು: ಸಚಿವ ತಂಗಡಗಿ ಸ್ಪಷ್ಟನೆ