ಬೆಂಗಳೂರು: ವಾಹನಗಳಿಗೆ ಹಳೆಯ ನಂಬರ್‌ಪ್ಲೇಟ್ ಬದಲು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ವಿಧಿಸಿದ್ದ ಗಡುವು ಅಂತ್ಯವಾಗುತ್ತಿದ್ದಂತೆ ಅವಧಿ ವಿಸ್ತರಿಸಲು ವಾಹನ ಮಾಲೀಕರ ಒತ್ತಾಯ ಹೆಚ್ಚಾಗುತ್ತಿದೆ. ಕೆಲವು ಹಳೆಯ ವಾಹನಗಳ ಕಂಪನಿಯ ಶೋರೂಮ್‌ಗಳ ಅಲಭ್ಯತೆ, ವೆಬ್ ಪೋರ್ಟಲ್‌ನ ಸರ್ವರ್ ಸಮಸ್ಯೆ ಹಾಗೂ ಪ್ರೀ ಬುಕ್ಕಿಂಗ್ ಸ್ಲಾಟ್ಗಳ ನಿಗದಿಯಾಗಿರುವುದು ವಾಹನ ಸವಾರರ ಸಂಕಷ್ಟಕ್ಕೆ ಕಾರಣವಾಗಿದೆ.
ಕೇಂದ್ರ ಸಾರಿಗೆ ಇಲಾಖೆ ಆದೇಶದ ಅನುಸಾರ 2019ರ ಏಪ್ರಿಲ್ 1ಕ್ಕೂ ಮುನ್ನ ಖರೀದಿಸಿದ/ನೊಂದಾಯಿಸಲ್ಪಟ್ಟ ವಾಹನಗಳು ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್ ಅಳವಡಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲೇ 2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು 2 ಕೋಟಿಯಷ್ಟಿದ್ದು, ಹಳೆಯ ನಂಬರ್ ಪ್ಲೇಟ್ ಬದಲಾವಣೆಗೆ ಮೊದಲಿಗೆ 2023ರ ನವೆಂಬರ್ 17ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾಕಷ್ಟು ವಾಹನಗಳ ಮಾಲೀಕರಿಗೆ ಮಾಹಿತಿಯ ಕೊರತೆ ಹಾಗೂ ಗೊಂದಲದ ಕಾರಣದಿಂದ ಸರಿಯಾದ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ 2024ರ ಫೆಬ್ರವರಿ 17ರವರೆಗೆ ಗಡುವು ವಿಸ್ತರಿಸಲಾಗಿತ್ತು.
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೇನು?: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಸಾಮಾನ್ಯ ನಂಬರ್‌ಪ್ಲೇಟ್‌ಗಳಿಗಿಂತಲೂ ಭಿನ್ನದ್ದಾಗಿದ್ದು, ಅಲ್ಯೂಮಿನಿಯಂ ಲೋಹದಿಂದ ಇವುಗಳನ್ನು ತಯಾರಿಸಲಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರದ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರದೊಂದಿಗೆ ಉಬ್ಬಿಕೊಂಡಿರುವ ರೀತಿ ನಂಬರ್‌ಗಳು ಅಚ್ಚಾಗಿರುತ್ತವೆ ಮತ್ತು ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಇಂಗ್ಲಿಷ್‌ನಲ್ಲಿ ಇಂಡಿಯಾ ಎಂಬ ಪದ ಹಲವೆಡೆ ಇರುತ್ತದೆ.
ಈ ನಂಬರ್ ಪ್ಲೇಟ್‌ಗಳನ್ನು ಎರಡು ಲಾಕ್ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಕಾರಿಯಾಗಲಿದ್ದು, ಇದರಿಂದಾಗಿ ಅಸಲಿ ಹಾಗೂ ನಕಲಿ ನಂಬರ್ ಪ್ಲೇಟ್‌ಗಳನ್ನು ಗುರುತಿಸಲು ಸುಲಭವಾಗಿರುತ್ತದೆ. ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿರುವುದಿಲ್ಲ.
ಎಚ್ಎಸ್ಆರ್‌ಪಿ ಪಡೆಯುವ ವಿಧಾನ: ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್ https://transport.karnataka.gov.in/english ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ https://www.siam.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅದರಲ್ಲಿ ಬುಕ್ ಎಚ್ಎಸ್ಆರ್‌ಪಿ ಆಯ್ಕೆಯನ್ನು ಕ್ಲಿಕ್ ಮಾಡಿ - ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ - ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ ನಂತರ ಎಚ್ಎಸ್ಆರ್‌ಪಿ ಅಳವಡಿಸಲು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹತ್ತಿರದ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ - ಹಾಗೂ ಶುಲ್ಕವನ್ನು ಅನ್‌ಲೈನ್‌ನಲ್ಲಿ ಪಾವತಿಸಬೇಕು (ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡಲು ಅವಕಾಶವಿಲ್ಲ) ನಂತರ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಚ್ಎಸ್ಆರ್‌ಪಿ ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ, ಆ ದಿನ ನಿಮ್ಮ ವಾಹನದ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
ಸೂಚನೆಗಳು:
- ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಎಸ್‌ಐಎಎಂ ವೆಬ್‌ಸೈಟ್ ಮೂಲಕ ಮಾತ್ರವೇ ಎಚ್ಎಸ್ಆರ್‌ಪಿ ಬುಕ್ ಮಾಡಬೇಕು.
- ಮಾರುಕಟ್ಟೆಯಲ್ಲಿ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ ಅಥವಾ ಇಂಡಿಯಾ ಎಂದು ಮುದ್ರಿಸಲ್ಪಟ್ಟ/ಅನುಕರಣೆಯ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ.
- ಎಚ್ಎಸ್ಆರ್‌ಪಿ ಅಳವಡಿಸದ ವಾಹನಗಳ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿಯಿರುವುದಿಲ್ಲ.
- ಶುಲ್ಕ ಪಾವತಿಸಿರುವ ಬಳಿಕ ಎಚ್ಎಸ್ಆರ್‌ಪಿ ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.
- ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಮಾತ್ರ ಆನ್‌ಲೈನ್ ಮೂಲಕ ಪಡೆಯಬೇಕು ಮತ್ತು ಇದು ಅಳವಡಿಕೆ ಶುಲ್ಕವನ್ನೊಳಗೊಂಡಿರುತ್ತದೆ. ಹೊರತಾಗಿ ಹೆಚ್ಚುವರಿಯಾಗಿ ಶುಲ್ಕವನ್ನು ವಾಹನ ನಿರ್ಮಾಣ ಕಂಪನಿಗಳು ಅಥವಾ ಏಜೆನ್ಸಿಗಳು ಪಡೆಯುವಂತಿಲ್ಲ.
- ಎಚ್ಎಸ್ಆರ್‌ಪಿ ಅಳವಡಿಕೆಗೆ ಪ್ರಸ್ತುತ ನವೆಂಬರ್ 17 ಕಡೆಯ ದಿನಾಂಕವಾಗಿರುತ್ತದೆ ಎಂದು ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಟಣೆಯಯಲ್ಲಿ ತಿಳಿಸಲಾಗಿದೆ.
- ಇದುವರೆಗೆ ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, ಗಡುವು ವಿಸ್ತರಣೆಯ ಬೇಡಿಕೆಯ ಕುರಿತು ಸರ್ಕಾರ ನಿರ್ಧಾರ ಹೊರಬೀಳಬೇಕಿದೆ.
ಇದನ್ನೂ ಓದಿ: ಹಳೆ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಲು 2024 ಫೆಬ್ರವರಿವರೆಗೆ ಅವಕಾಶ: ಸಚಿವ ರಾಮಲಿಂಗಾ ರೆಡ್ಡಿ