ಬೆಂಗಳೂರು: ಸಾಂಪ್ರದಾಯಿಕ ಗ್ರಿಡ್-ಆಧಾರಿತ ವಿದ್ಯುತ್ ಅವಲಂಬನೆಯನ್ನು ತಗ್ಗಿಸಲು, ಸೌರ ಚಾಲಿತ ಪಂಪ್‌ಸೆಟ್‌ಗಳ ಬಳಕೆಗೆ ಒತ್ತು ನೀಡಲು ಸರ್ಕಾರ ರೈತರಿಗೆ ಸಬ್ಸಿಡಿ ನೀಡುತ್ತದೆ. ಕುಸುಮ್ ಬಿ ಯೋಜನೆಯಡಿಯಲ್ಲಿ ಸೋಲಾರ ಪಂಪ್ಸೆಟ್ಗಳಿಗೆ ಶೇ.80ರಷ್ಟು ಸಬ್ಸಿಡಿ ಸೌಲಭ್ಯವಿದೆ. 'ಕುಸುಮ್ ಬಿ' ಯೋಜನೆಯ ಸದುಪಯೋಗ ಪಡಿಸಿಕೊಂಡು ರೈತರು ಕೃಷಿಗೆ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಬೇಕು.
ಕುಸುಮ್ ಬಿ ಯೋಜನೆಯಡಿ ಸೌರ ಪಂಪ್‌ಸೆಟ್ ಬಳಕೆಗೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶನಿವಾರ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ 'ರೈತ ಸೌರಶಕ್ತಿ ಮೇಳ' ಆಯೋಜಿಸಿತ್ತು.
ಕುಸುಮ್ ಬಿ ಯೋಜನೆ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್ ಸೆಟ್ ಅಳವಡಿಕೆಯನ್ನು ರೈತರ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ.30 ರಷ್ಟು ಸಹಾಯಧನವನ್ನು ಶೇ 50 ಕ್ಕೆ ಹೆಚ್ಚಿಸಿದೆ. ಇನ್ನು ಕೇಂದ್ರ ಸರ್ಕಾರ ಶೇ.30 ರಷ್ಟು ಹಣ ನೀಡುತ್ತದೆ. ಒಟ್ಟಾರೆ ಮೊತ್ತದಲ್ಲಿ ಶೇ.20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಿದೆ. ಕರ್ನಾಟಕದಲ್ಲಿ ಈವರೆಗೆ ಸುಮಾರು 7000 ಸೌರ ಪಂಪ್ ಸೆಟ್‌ಗಳನ್ನು ಅಳವಡಿಸಲಾಗಿದೆ.
ಆ್ಯಪ್ ಮೂಲಕವೂ ಅರ್ಜಿ?: ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ರೈತರಿಗೆ ಸೌರ ಪಂಪ್‌ಸೆಟ್‌ಗಳ ಬಗ್ಗೆ ಮಾಹಿತಿ ನೀಡಲು ಮೇಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸೌರ ಪಂಪ್‌ಸೆಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನೇರವಾಗಿ ನೋಡುವ ಅವಕಾಶ ಕಲ್ಪಿಸಲಾಗಿತ್ತು. ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳುವ ರೈತರಿಗಾಗಿಯೇ ಆನ್‌ಲೈನ್ ಪೋರ್ಟಲ್ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ, ಮೇಳದಲ್ಲಿ ‘ಸೌರ ಮಿತ್ರ’ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಆ ಆ್ಯಪ್ ಮೂಲಕವೂ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
"ಸೋಲಾರ್ ಪಂಪುಗಳನ್ನು ಪೂರೈಸುವಲ್ಲಿ ಮತ್ತು ಸ್ಥಾಪಿಸುವಲ್ಲಿ 25 ವರ್ಷಗಳ ಅನುಭವವಿದೆ. ಕಳೆದ ಏಳು ವರ್ಷಗಳಿಂದ ರಾಜ್ಯದಲ್ಲಿ ಸೋಲಾರ್ ಪಂಪ್ಗಳನ್ನು ವಿತರಿಸಲಾಗುತ್ತಿದೆ. ಇನ್ನು 'ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ 10,000ಕ್ಕೂ ಹೆಚ್ಚು ಸೌರ ಪಂಪುಗಳನ್ನು ಸ್ಥಾಪಿಸಲಾಗಿದೆ. ಇತರ ಪಂಪ್ಗಳಿಗೆ ಹೋಲಿಸಿದರೆ ದಿನಕ್ಕೆ ಹೆಚ್ಚಿನ ನೀರನ್ನು ನೀಡುವ ಹೆಚ್ಚಿನ ದಕ್ಷತೆಯ ಡಿಸಿ ಸೋಲಾರ್ ಪಂಪ್ಗಳು ಒದಗಿಸಲಾಗುತ್ತಿದೆ. ಸೋಲಾರ್ ಪಂಪ್ಗೆ ಸುಮಾರು 4.10 ಲಕ್ಷ ರೂ.ವರೆಗೆ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಶೇ.30, ರಾಜ್ಯ ಸರ್ಕಾರದಿಂದ ಶೇ.50 ರಷ್ಟು ಸಹಾಯಧನ ಸಿಗುತ್ತದೆ. ರೈತರು ಶೇ. 20ರಷ್ಟು ಭರಿಸಿದರೆ, ಅಂದರೆ ರೈತರು ಅಂದಾಜು 80-90 ಸಾವಿರ ರೂ. ಕಟ್ಟಿದರೆ ಐದು ವರ್ಷ ಗ್ಯಾರಂಟಿ ಇರುತ್ತದೆ. ಸೋಲಾರ್ ಪಂಪ್ಗೆ ಆನ್‌ಲೈನ್ ಮೂಲಕ ಸಲ್ಲಿಸಿ ಅನುಮತಿ ಪಡೆದರೆ ಐದು ವರ್ಷ ಅದನ್ನು ನಿರ್ವಹಿಸುವ ಜವಾಬ್ದಾರಿ ನಮ್ಮದು. 3 ಹೆಚ್ಪಿ, 5 ಹೆಚ್ಪಿ, 7.5 ಹೆಚ್ಪಿ ಮತ್ತು 10 ಹೆಚ್ಪಿವರೆಗೂ ಇದೆ. ಹತ್ತು ಹೆಚ್ಪಿ ಆಳವಡಿಸಿಕೊಂಡರೆ ಸುಮಾರು 10 ಎಕರೆವರೆಗೂ ನೀರು ಹರಿಸಬಹುದು" ಎಂದು ಹೈದರಾಬಾದ್ ಮೂಲದ ಸನ್ ಗ್ರೇಸ್ ಎನರ್ಜಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಪವನ್ ಕುಮಾರ್ ಸಿದ್ದಿ ಅವರು ಈಟಿವಿ ಭಾರತಗೆ ತಿಳಿಸಿದರು.
ಇದನ್ನೂ ಓದಿ: ಸಮಗ್ರ ಕೃಷಿಗೆ ಒತ್ತು ನೀಡಿದ ರಾಜ್ಯ ಸರ್ಕಾರ: ರೈತ ಸೌರಶಕ್ತಿ ಮೇಳ ವೀಕ್ಷಿಸಿದ 5 ಸಾವಿರಕ್ಕೂ ಹೆಚ್ಚು ರೈತರು
ಕುಸುಮ್ ಸಿ ಯೋಜನೆ: ಫೀಡರ್ ಮಟ್ಟದ ಸೋಲಾರೈಸೇಶನ್ ಯೋಜನೆಯಾದ 'ಕುಸುಮ್-ಸಿ' ಮೂಲಕ, ನೀರಾವರಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಈ ಯೋಜನೆಯಡಿ ರೆಸ್ಕೋ ಡೆವಲಪರ್‌ಗಳ ಮೂಲಕ 1302 ಮೆ.ವ್ಯಾ. ವಿಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳನ್ನು 248 ಉಪಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ 806 ಕೃಷಿ ಫೀಡರ್ ಗಳನ್ನೊಳಗೊಂಡ 3,37,331 ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಸುತ್ತದೆ. ಎಂಎನ್ಆರ್‌ಇಯು ಪ್ರತಿ ಮೆ.ವ್ಯಾ.ಗೆ 1.05 ಕೋಟಿ ರೂ. ಅನುದಾನ ನೀಡುತ್ತಿದೆ.
ಬೆಸ್ಕಾಂ ಮತ್ತು ಹೆಸ್ಕಾಂ ಗಳಲ್ಲಿ 753.18 ಮೆ.ವ್ಯಾ.ಗೆ ಬಿಡ್‌ಗಳನ್ನು ಸ್ವೀಕರಿಸಲಾಗಿದ್ದು, 107 ಉಪಕೇಂದ್ರಗಳ 1,80,430 ಕೃಷಿ ಪಂಪ್ ಸೆಟ್‌ಗಳು ಮತ್ತು 463 ಕೃಷಿ ಫೀಡರ್‌ಗಳನ್ನು ಒಳಗೊಂಡಿವೆ. 12 ಸೋಲಾರ್ ಪವರ್ ಜನರೇಟರ್‌ಗಳಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ಈ ಸೌರ ವಿದ್ಯುತ್ ಸ್ಥಾವರಗಳನ್ನು ಮಾರ್ಚ್-2025 ರೊಳಗೆ ಗ್ರಿಡ್‌ಗೆ ಸಂಪರ್ಕಿಸಲಾಗುತ್ತದೆ.
ಇದನ್ನೂ ಓದಿ: ಏ.1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ: ಬಿಪಿಎಲ್ ಕಾರ್ಡ್ ಬೇಕಾ? ಈ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ