ಬೆಂಗಳೂರು : ತನ್ನ ಗಂಡನೊಂದಿಗೆ ಸಲುಗೆ ಹೊಂದಿರುವ ಶಂಕೆಯಿಂದ ಆತನ ಪತ್ನಿ ಮತ್ತು ಆಕೆಯ ಕಡೆಯವರು ಮಹಿಳೆಯೊಬ್ಬರ ಮನೆ ಮೇಲೆ ದಾಳಿ ಮಾಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ರಾಧಿಕಾ ಎಂಬುವರು ನೀಡಿದ ದೂರಿನನ್ವಯ ಕೆಂಪರಾಜು, ಶರತ್ ಹಾಗೂ ಸಮಂತಾ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರಿನ ಸಾರಾಂಶ : ರಾಧಿಕಾ ಮಾರುತಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಶರಣ್ ಅವರು ಆತ್ಮೀಯವಾಗಿದ್ದು, ದಿ; 2/02/24 ರಂದು ಸಿಟಿ ಮಾಲ್ನಲ್ಲಿ ಜೊತೆಯಲ್ಲಿ ಇದ್ದುದ್ದರಿಂದ ರಾತ್ರಿ 11.30 ಗಂಟೆ ಸುಮಾರಿಗೆ ತಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿತರಾದ ಕೆಂಪರಾಜು, ಶರತ್ ಮತ್ತು ಶ್ರೀಮತಿ ಸಮಂತಾ ಅವರು ನಮ್ಮ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದರು. ಏಕಾಏಕಿ ಮನೆಯ ಬಾಗಿಲು ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆಯನ್ನು ಒಡ್ಡಿದ್ದಾರೆ. ಅಲ್ಲದೆ, ಕಿಟಕಿ ಗಾಜನ್ನು ಒಡೆದು ಕಿಟಕಿಯ ಮುಖಾಂತರ ದೊಣ್ಣೆಗಳಿಂದ ಕೈಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಮೂರು ಜನ ಸೇರಿಕೊಂಡು ಮನೆಯ ಮುಂಭಾಗ ನಿಲ್ಲಿಸಿದ್ದ ಎರಡು ಕಾರ್, ಮೂರು ಬೈಕ್ ಹಾಗೂ ಮನೆಯ ಬಾಗಿಲು, ಕಿಟಕಿಗಳನ್ನು ಒಡೆದು ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟವನ್ನುಂಟು ಮಾಡಿ ತನಗೆ ಹಾಗೂ ತನ್ನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿರುವುದರಿಂದ ಮೂರು ಜನ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಗೆ ರಾಧಿಕಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಪ್ರಕರಣ ವಾಪಸ್ ಪಡೆಯಲು ನಿರಾಕರಣೆ: ಗೃಹಿಣಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ