ಬೆಂಗಳೂರು: ತನ್ನ ಅಕ್ಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಣ, ಚಿನ್ನಾಭರಣ ದೋಚಿದ್ದ ತಂಗಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದು, 51 ಲಕ್ಷ ನಗದು ಹಾಗೂ 46 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗದೇವನಹಳ್ಳಿಯ ಆರ್.ಆರ್.ಲೇಔಟ್ನಲ್ಲಿ ವಾಸವಾಗಿದ್ದ ಕುನ್ನೇಗೌಡ ಎಂಬವರು ನೀಡಿದ ದೂರಿನ ಮೇರೆಗೆ ನಾದಿನಿ ಉಮಾ (22) ಎಂಬಾಕೆಯನ್ನು ಬಂಧಿಸಲಾಗಿದೆ. ಲಗ್ಗೆರೆಯಲ್ಲಿ ವಾಸವಾಗಿದ್ದ ಉಮಾ ಕನ್ಸಲ್ಟೆಂಟ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಕೆಯ ಪೋಷಕರು ಕುಣಿಗಲ್ನ ಹುಲಿಯೂರುದುರ್ಗದಲ್ಲಿ ವಾಸವಿದ್ದಾರೆ. ಈಕೆ ತನ್ನ ಅಕ್ಕ ಸುಮಿತ್ರ ಜೊತೆಗೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು.
ಕಳೆದ ತಿಂಗಳು 22ರಂದು ಊರ ಹಬ್ಬದ ಪ್ರಯುಕ್ತ ಸುಮಿತ್ರ ಹಾಗೂ ಕುಟುಂಬದವರು ಊರಿಗೆ ಹೋಗಲು ಸಂಬಂಧಿಗೆ ಮನೆ ಕೀ ಕೊಟ್ಟು ರಾತ್ರಿ ಮಲಗುವಂತೆ ಸೂಚಿಸಿದ್ದರಂತೆ. ಹೀಗಾಗಿ ಸಂಬಂಧಿ 24ರಂದು ರಾತ್ರಿ ಮಲಗಲು ಹೋದಾಗ ಮನೆಯ ಬೀರು ಬಾಗಿಲು ತೆರೆದಿರುವುದು ಹಾಗೂ ಕೊಠಡಿಯಲ್ಲಿನ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿ ಕಳ್ಳತನವಾಗಿರುವ ಬಗ್ಗೆ ತಿಳಿದುಬಂದಿತ್ತು. ಈ ಸಂಬಂಧ ವಿಷಯ ತಿಳಿದುಕೊಂಡು ಕುನ್ನೇಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ನಕಲಿ ಕೀ ಬಳಸಿ ಕಳ್ಳತನ: ಅಕ್ಕನ ಮನೆಯವರು ಊರಿಗೆ ಹೋಗಿರುವುದನ್ನು ಅರಿತ ಉಮಾ, ನಕಲಿ ಕೀ ಬಳಸಿಕೊಂಡು ಮನೆಯಲ್ಲಿದ್ದ 65 ಲಕ್ಷ ಬೆಲೆಬಾಳುವ ಚಿನ್ನದ ನಾಣ್ಯ ಹಾಗೂ ನಗದು ಕಳ್ಳತನ ಮಾಡಿದ್ದಳು. ಅಲ್ಲದೆ ಬೀಗ ಒಡೆಯದೇ ಕಳ್ಳತನ ಮಾಡಿರುವುದು ಸಂಬಂಧಿಕರೇ ಅಥವಾ ಪರಿಚಯಸ್ಥರೇ ಎಂಬ ಅನುಮಾನ ಮೂಡಿತ್ತು.
ದೂರುದಾರ ಮನೆಗೆ ಮಲಗಲು ಬರುತ್ತಿದ್ದ ಸಂಬಂಧಿಯನ್ನು ವಿಚಾರಿಸಿದಾಗ ಕೃತ್ಯವೆಸಗಿರುವ ಸಾಕ್ಷ್ಯಾಧಾರ ಲಭ್ಯವಾಗಿರಲಿಲ್ಲ. ಮನೆ ಕಡೆ ಉಮಾ ಬಂದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮಾಹಿತಿ ಆಧರಿಸಿ ಆಕೆಯನ್ನು ವಶಕ್ಕೆ ಪಡೆದುಕೊಂಡು ತೀವ್ರವಾಗಿ ವಿಚಾರಿಸಿದಾಗ ಕೃತ್ಯವೆಸಗಿರುವನ್ನು ಒಪ್ಪಿಕೊಂಡಿದ್ದಾಳೆ. ಈಕೆ ಮಾಡಿಕೊಂಡಿದ್ದ ಸಾಲ ಹಾಗೂ ಶೋಕಿ ಜೀವನಕ್ಕಾಗಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಐದು ಲಕ್ಷ ನಗದು ಹಾಗೂ 30 ಚಿನ್ನದ ನಾಣ್ಯಗಳನ್ನು ವಾಸವಿದ್ದ ಮನೆಯಿಂದ ವಶಪಡಿಸಿಕೊಂಡರೆ ಇನ್ನುಳಿದ 16 ಚಿನ್ನದ ನಾಣ್ಯ ಹಾಗೂ 46.90 ಲಕ್ಷ ಹಣವನ್ನು ತಾನು ಕೆಲಸ ಮಾಡುವ ಆಟೊ ಕನ್ಸಲ್ಟೆಂಟ್ ಮಾಲೀಕರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಾಲೀಕರ ಕಣ್ತಪ್ಪಿಸಿ ವಜ್ರ, ಚಿನ್ನ, ನಗದು ಕದ್ದ ಕೆಲಸದಾಕೆ ಸೆರೆ - Theft Case