ರಾಯಚೂರು: ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮೃತನ ಸಂಬಂಧಿಕರು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಂಧಲೆ ಸೃಷ್ಟಿಸಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ವಿಜಯ್ ಪಾಲಿ ಕ್ಲಿನಿಕ್ನಲ್ಲಿ ಅದ್ರೂನ್ ಕಿಲ್ಲಾ ನಿವಾಸಿಯಾದ ಹಮೀದ್ ಎಂಬವರನ್ನು ಹೃದಯ ಸಂಬಂಧಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಇದರಿಂದ ಕೆರಳಿದ ರೋಗಿಯ ಸಂಬಂಧಿಕರು ಸಾವಿಗೆ ಆಸ್ಪತ್ರೆಯ ಸಿಬ್ಬಂದಿಯೇ ಕಾರಣ ಎಂದು ಆರೋಪಿಸಿ ಹಲ್ಲೆ ನಡೆಸಿ, ಕುರ್ಚಿ ಎಸೆದು ದಾಂಧಲೆ ನಡೆಸಿದ್ದಾರೆ ಎಂದು ವೈದ್ಯರು ಆರೋಪಿಸಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಈ ಕುರಿತು ಆಸ್ಪತ್ರೆಯ ವೈದ್ಯ ಡಾ.ಅಜಿತ್ ಕುಲಕರ್ಣಿ ಮಾತನಾಡಿ, "ಮೃತಪಟ್ಟ ರೋಗಿ 2016ರಲ್ಲಿ ಚಿಕಿತ್ಸೆ ಪಡೆಯಲು ಇಲ್ಲಿಗೆ ಬಂದಿದ್ದರು. ಆಗ ನಾನು ಬೈಪಾಸ್ ಸರ್ಜರಿ ಮಾಡಬೇಕೆಂದು ಸಲಹೆ ನೀಡಿದ್ದೆ. ಅದಾದ ಬಳಿಕ ರೋಗಿ ಇಲ್ಲಿಗೆ ಚಿಕಿತ್ಸೆಗೆ ಬಂದಿರಲಿಲ್ಲ. ಸೋಮವಾರ ಮೊದಲು ಬೇರೆ ಆಸ್ಪತ್ರೆಗೆ ಹೋಗಿ, ಕೊನೆ ಸಮಯದಲ್ಲಿ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರ ಆರೋಗ್ಯ ಗಂಭೀರವಾಗಿತ್ತು. ಆದರೂ ನಮ್ಮ ಡ್ಯೂಟಿ ಡಾಕ್ಟರ್ ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು. ಇದರಿಂದ ಕೊಪಗೊಂಡ ಮೃತನ ಸಂಬಂಧಿಕರು ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ" ಎಂದರು.
ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ನಿರ್ಮಾಪಕ ಉಮಾಪತಿ ಗೌಡ ಕುರಿತು ಅವಹೇಳನ ಆರೋಪ: ದರ್ಶನ್ ಅಭಿಮಾನಿಯ ಬಂಧನ - Darshan fan Arrest