ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಚಾಲಕನ ನಿರ್ಲಕ್ಷ್ಯದಿಂದ ಕ್ಯಾಂಟರ್ವೊಂದು ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ತಾಯಿ ಮಗಳ ಮೇಲೆ ಹರಿದಿದೆ. ಪರಿಣಾಮ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಾಯಗೊಂಡಿದ್ದಾರೆ.
ಹೊಸಕೋಟೆ ನಗರದ ಕೋರ್ಟ್ ಸರ್ಕಲ್ ಬಳಿ ಘಟನೆ ನಡೆದಿದೆ. ಬನ್ನೇರುಘಟ್ಟ ಮೂಲದ ಯುವತಿ ಸುಧಾ (20) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಹೊಸಕೋಟೆ ಮೂಲಕ ಕೋಲಾರದ ಕಡೆಗೆ ಕ್ಯಾಂಟರ್ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಬೈಕ್ ಸವಾರ ನಜೀರ್ ಖಾನ್, ಕ್ಯಾಂಟರ್ ಚಾಲಕ ಶರೀಫ್ ಉಲ್ಲಾಗೆ ಗಂಭೀರ ಗಾಯವಾಗಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇತ್ತೀಚಿನ ಘಟನೆಗಳು-ಜಾತ್ರೆಗೆ ನುಗ್ಗಿದ ಹಾಲಿನ ಟ್ಯಾಂಕರ್: ಹಾಲಿನ ಟ್ಯಾಂಕರ್ವೊಂದು ದಿಢೀರ್ ಜನ ಸೇರಿದ್ದ ಜಾತ್ರೆಗೆ ನುಗ್ಗಿ ಮೂವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30 ಜನ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಗ್ಯಾಂಗ್‌ಟಾಕ್‌ನ ರಾಣಿಪುಲ್ ಎಂಬಲ್ಲಿ ಶನಿವಾರ ರಾತ್ರಿ ಸಂಭವಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.ರಾಣಿಪುರ್ ತಾಂಬ್ಲಾ ಜಾತ್ರೆಯ ವೇಳೆ ರಾತ್ರಿ ಸುಮಾರಿಗೆ 7.13ಕ್ಕೆ ಸಿಕ್ಕೀಂ ಹಾಲು ಒಕ್ಕೂಟದ ಟ್ಯಾಂಕರ್ ಸಿಲಿಗುರಿ ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡ ಹಠಾತ್ ಜಾತ್ರೆ ಮೈದಾನಕ್ಕೆ ನುಗ್ಗಿತ್ತು. ಬಳಿಕ ನೇರವಾಗಿ ಜನರ ಮೇಲೆಯೇ ಹರಿದಿತ್ತು.
ಮರಕ್ಕೆ ಕಾರು ಡಿಕ್ಕಿ: ನಿಯಂತ್ರಣ ಕಳೆದುಕೊಂಡ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿಯ ದಾನಿಹಳ್ಳಿ ಸಮೀಪ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿತ್ತು. ಘಟನೆಯಲ್ಲಿ ಸಿದ್ದೇಶ್ (34) ಎಂಬುವವರು ಸಾವನ್ನಪ್ಪಿದ್ದರು.
ದಾವಣಗೆರೆ ಡಿಎಆರ್ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದೇಶ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರೊಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮರಳಿ ಊರಿಗೆ ಕರೆದುಕೊಂಡು ಬರಲು ತೆರಳಿದ್ದರು. ಈ ವೇಳೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವೇಗದ ಚಾಲನೆಯಿಂದ ಅಪಘಾತ ಸಂಭವಿಸಿತ್ತು.
ಇದನ್ನೂ ಓದಿ: ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪಿಕಪ್ ವಾಹನ - ವಿಡಿಯೋ