ಬಳ್ಳಾರಿ : ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಈ ಬಾರಿ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವದ ಕಾರ್ಯಕ್ರಮವು ಶುಕ್ರವಾರ (ಸೆ.06) ನಡೆಯಲಿದ್ದು, ಈ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ವಿವಿ ಕುಲಪತಿ ಡಾ. ಎಂ.ಮುನಿಸ್ವಾಮಿ ತಿಳಿಸಿದ್ದಾರೆ.
ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಸಾಧನೆ ಮಾಡಿದ ನಟಿ ಉಮಾಶ್ರೀ, ಕೈಗಾರಿಕೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಕೈ ಜೋಡಿಸಿದ ಎಸ್.ಕೆ.ಮೋದಿ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ನಿರಂತರ ಸೇವೆಗಾಗಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಸೆ.6ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ ಘಟಿಕೋತ್ವವ ಕಾರ್ಯಕ್ರಮದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿವಿ ಕುಲಪತಿ ತಿಳಿಸಿದರು.
ಮೂವರು ಸಾಧಕರ ಸಾಧನೆಯ ಹಾದಿ: ಉಮಾಶ್ರೀ ಅವರು ಮೂಲತಃ ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿ ಮೇ 10, 1957 ರಂದು ಜನಿಸಿದವರು. 100ಕ್ಕೂ ಹೆಚ್ಚು ನಾಟಕಗಳಲ್ಲಿ, 300 ಪ್ರದರ್ಶನಗಳಲ್ಲಿ ಮತ್ತು 460ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿರುವ ಇವರು 2013 ರಿಂದ 2018ರವರೆಗೆ ಕನ್ನಡ ಮತ್ತು ಸಂಸ್ಕೃತಿ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರನರ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ನಾಟ್ಯ ಸಮನ್ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, 10ನೇ ಒಷಿಯನ್ಸ್ ಸಿನೆಫ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಗುಲಾಬಿ ಟಾಕೀಸ್' ಚಲನಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ಪ್ರಶಸ್ತಿ, ಪ್ರತಿಷ್ಠಿತ ರಜತ್ ಕಮಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿವಂಗತ ಡಿ ದೇವರಾಜ ಅರಸು ರಾಷ್ಟ್ರೀಯ ಶ್ರೀರತ್ನ ಪ್ರಶಸ್ತಿ, ಪಂಚರತ್ನ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣದೇವರಾಯ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ೠ
ಎಸ್ ಕೆ ಮೋದಿ ಜೀವನ - ಸಾಧನೆ: ಇನ್ನು ಕೈಗಾರಿಕೆ ಮತ್ತು ಸಮಾಜ ಸೇವೆಯಲ್ಲಿ ಎಸ್.ಕೆ. ಮೋದಿ ಅವರು ನಿರತರಾಗಿದ್ದು ಅವರು ಜನವರಿ 15, 1951 ರಂದು ಜನಿಸಿದರು. ಬಳ್ಳಾರಿಯ ವಿಭೂತಿ ಗುಡ್ಡ ಮೈನ್ಸ್ ಪ್ರೈ. ಲಿಮಿಟೆಡ್ ನಿರ್ಮಾಣ, ಧಾರ್ಮಿಕ ಸ್ಥಳಗಳ ನವೀಕರಣ, ಉಚಿತ ಶಿಕ್ಷಣವನ್ನು ಒದಗಿಸುವುದರ ಜೊತೆಗೆ, ಶಾಲೆಗಳಿಗೆ ಅಗತ್ಯ ಸಾಮಗ್ರಿಗಳ ದಾನ, ನೇತ್ರ ಶಿಬಿರಗಳ ಆಯೋಜನೆ, ಉಚಿತ ವೈದ್ಯಕೀಯ ನೆರವು, ವೈದ್ಯಕೀಯ ಕಾಲೇಜಿಗೆ ಸ್ಥಾನಿಂಗ್ ಯಂತ್ರಗಳ ದಾನ, ಸಾರ್ವಜನಿಕರಿಗಾಗಿ ನೀರಿನ ಟ್ಯಾಂಕ್‌ಗಳ ನಿರ್ಮಾಣ, ಪೊಲೀಸ್ ಇಲಾಖೆ, ನಗರ ನಿಗಮ, ಮಧ್ಯಾಹ್ನದ ಬಿಸಿ ಊಟ ವಿತರಣೆಗೆ ವಾಹನಗಳ ಕೊಡುಗೆ, ಅಕ್ಷಯ ಪಾತ್ರಾ ಫೌಂಡೇಶನ್‌ಗೆ ಅಡುಗೆ ಮನೆ ನಿರ್ಮಾಣ ಸೇರಿದಂತೆ ತಮ್ಮ ಮಾಲೀಕತ್ವದ ಮಾರುತಿ ಸುಜುಕಿ ಡೀಲರ್ಶಿಪ್ಗಾಗಿ ಹಲವಾರು ಪ್ಲಾಟಿನಂ ಪ್ರಶಸ್ತಿಗಳನ್ನು ಪಡೆದ ಶ್ರೇಯಸ್ಸು ಇವರದ್ದಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಚಂದ್ರಮೌಳೇಶ್ವರ ಶಿವಾಚಾರ್ಯರ ಕೊಡುಗೆ: ಶಿಕ್ಷಣ ಕ್ಷೇತ್ರದಲ್ಲಿ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಹೆಸರು ಪಡೆದಿದ್ದು ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಅವರು ಮೂಲತಃ ಅಖಂಡ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನಾಗತಿಬಸಾಪುರ ಗ್ರಾಮದವರು. ಸೆಪ್ಟೆಂಬರ್ 3, 1937ರಲ್ಲಿ ಅವರಗೋಳದಲ್ಲಿ ಜನಿಸಿದರು. ತತ್ವಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಅನಕ್ಷರತೆ, ಬಡತನ ಮತ್ತು ನಿರುದ್ಯೋಗದಂತಹ ಗ್ರಾಮೀಣ ಸಮಸ್ಯೆಗಳ ಬಗ್ಗೆ ಕಾಳಜಿಯನ್ನು ಹೊಂದಿ 1969ರಲ್ಲಿ ತೆಗ್ಗಿನಮಠದ ಕಲೆ ಮತ್ತು ಶಿಕ್ಷಣ ಸೊಸೈಟಿ ಸ್ಥಾಪಿಸಿದರು.
ಪಾಲಿಟೆಕ್ನಿಕ್ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿ ಯುವಕರಿಗೆ ತರಬೇತಿ ನೀಡುವುದರ ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉನ್ನತೀಕರಣ, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು ಮತ್ತು ಉಚಿತ ಹಾಸ್ಟೆಲ್‌ಗಳನ್ನು ಸ್ಥಾಪಿಸಿದ್ದಾರೆ. ಇವರಿಗೆ ಶಿವಾಚಾರ್ಯ ರತ್ನ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ರಾಷ್ಟ್ರೀಯ ವಿಕಾಸ ರತ್ನ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಚಿನ್ನದ ಪದಕ ಲಭಿಸಿವೆ ಎಂದು ವಿವಿ ಕುಲಪತಿ ಡಾ. ಎಂ.ಮುನಿಸ್ವಾಮಿ ಸಾಧಕರ ಪರಿಚಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ರುದ್ರೇಶ್ ಎಸ್.ಎನ್, ಮೌಲ್ಯ ಮಾಪನ ಕುಲಸಚಿ ಪ್ರೊ.ರಮೇಶ್ ಇದ್ದರು.