ದಾವಣಗೆರೆ: ರಾಜ್ಯಪಾಲರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ಖಂಡಿಸಿ ಹೊನ್ನಾಳಿ ಪಟ್ಟಣ ಅಹಿಂದ ವರ್ಗ ಬಂದ್ಗೆ ಕರೆ ನೀಡಿದೆ. ಈ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ.
ಹೊನ್ನಾಳಿ ಪಟ್ಟಣ ಬಂದ್ಗೆ ಕರೆ ನೀಡಿರುವ ಹಾಲುಮತ ಹಾಗೂ ಅಲ್ಪಸಂಖ್ಯಾತ, ದಲಿತ ಸಂಘಟನೆಗಳು, ತಕ್ಷಣ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಅನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿವೆ. ಸಿಎಂಗೆ ಬೆಂಬಲ ಸೂಚಿಸಿ ಹೊನ್ನಾಳಿ ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ವ್ಯಾಪಾರಿಗಳು ಉದ್ದಿಮೆದಾರರು ಖಾಸಗಿ ಸಾರಿಗೆಯವರೂ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ರಾಜ್ಯಪಾಲರ ನಡೆ ಖಂಡಿಸಿ ಕರೆದಿರುವ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಖಾಸಗಿ ಬಸ್, ಆಟೋ ಸಂಚಾರವಿಲ್ಲ. ಟಿಬಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ, ಮಾರುಕಟ್ಟೆ ಎಲ್ಲ ಖಾಲಿ ಖಾಲಿಯಾಗಿದೆ. ಇಡೀ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಹಿಂದ ನಾಯಕರು ಕರೆದಿರುವ ಬಂದ್ಗೆ ಪ್ರತಿಯೊಂದು ವರ್ಗದ ಜನ ಕೈ ಜೋಡಿಸಿ, ಸಿಎಂ ಪರ ನಿಂತಿದ್ದಾರೆ. ವಿವಿಧ ಅಂಹಿದ ಸಂಘಟನೆಗಳು ಸೇರಿ ಹೊನ್ನಾಳಿ ಪಟ್ಟಣದ ಟಿಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಇದಲ್ಲದೇ ಬೈಕ್ ರ‍್ಯಾಲಿ ಮಾಡುವ ಮೂಲಕ ಬಿಜೆಪಿ - ಜೆಡಿಎಸ್ ಹಾಗು ರಾಜ್ಯಪಾಲರ ನಡೆಯನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮುಡಾ ಹಗರಣ: ಬಿಜೆಪಿ-ಜೆಡಿಎಸ್ ವಿರುದ್ಧ ದಾವಣಗೆರೆಯಲ್ಲಿ ಅಹಿಂದ ಪ್ರತಿಭಟನೆ - AHINDA Protest