ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆ ನಿಗದಿಯಾಗಿದ್ದ (ಸೆ.22) ದಿನವೇ ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎಸ್‌ಸಿಗಿಂತ ಮೊದಲೇ ನಾವು ಪಿಎಸ್‌ಐ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದೇವೆ. ಮುಂದೂಡುವ ಸಾಧ್ಯತೆ ಇದ್ದರೆ, ಹೆಚ್ಚಿನ ಮನವಿಗಳು ಬಂದಿದ್ದರೆ ಪರಿಗಣಿಸಬಹುದು. ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಪಿಎಸ್ಐ ನೇಮಕಾತಿ ಬಹಳ ವಿಳಂಬವಾಗಿದೆ. ಈ ಹಿಂದೆ ಗೃಹ ಸಚಿವನಾಗಿದ್ದಾಗ ಯಾವುದೇ ಅಡೆತಡೆಗಳಿಲ್ಲದೇ ಸಾವಿರಾರು ಹುದ್ದೆಗಳ ನೇಮಕಾತಿ ಸುಲಭವಾಗಿ ನಡೆದಿದೆ. ಪಿಎಸ್ಐ ಹಗರಣದ ಬಳಿಕ ವಿಳಂಬ ಆಗುತ್ತಿದೆ. ಫಲಿತಾಂಶ ಪ್ರಕಟಿಸಲು ಸಹ ಕೋರ್ಟ್‌ಗೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶ ಪ್ರಕಟಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ್ ನಿರಾಣಿ ವಿರುದ್ಧದ ಅಕ್ರಮಗಳ ಕುರಿತು ಪ್ರಾಸಿಕ್ಯೂಷನ್‌ಗೆ ವರ್ಷಾನುಗಟ್ಟಲೇ ಅವಕಾಶ ಕೊಟ್ಟಿಲ್ಲ ಎಂಬುದನ್ನು ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ. ರಾಜ್ಯಪಾಲರು ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆ. ಈ ವಿಚಾರವನ್ನು ರಾಷ್ಟ್ರಪತಿ ಭೇಟಿಗೆ ಹೋದಾಗ ಪ್ರಸ್ತಾಪಿಸುತ್ತೇವೆ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಕೊರತೆ ಸರಿದೂಗಿಸಲು 16ನೇ ಹಣಕಾಸು ಆಯೋಗದಿಂದ ಸಕಾರಾತ್ಮಕ ಸ್ಪಂದನೆ : ಸಿಎಂ ಸಿದ್ದರಾಮಯ್ಯ - Chief Minister Siddaramaiah