ಬೆಂಗಳೂರು: ಕಾನೂನು ಎಲ್ಲರಿಗೂ ಒಂದೇ. ಪರಮೇಶ್ವರ್ಗೂ ಒಂದೇ, ದರ್ಶನ್ ಅವರಿಗೂ ಒಂದೇ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರದಲ್ಲಿ ಮಾತನಾಡಿದ ಸಚಿವರು, ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಕಾನೂನು ಎಲ್ಲರಿಗೂ ಒಂದೇ. ದರ್ಶನ್ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ. ಅವರನ್ನೀಗ ಅರೆಸ್ಟ್ ಮಾಡಿ, ತನಿಖೆ ಮುಂದುವರಿಸಿದ್ದಾರೆ. ತನಿಖೆಯಲ್ಲಿ ಏನು ವಿಚಾರ ಬರಲಿದೆಯೋ ಅದರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಆ ಹುಡುಗ ರೇಣುಕಾಸ್ವಾಮಿ, ದರ್ಶನ್ ಗೆಳತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೇನೋ ಪೋಸ್ಟ್ (ಕಾಮೆಂಟ್) ಮಾಡಿದ್ದ. ಅದರ ಬಗ್ಗೆ ಅವರು ದೂರು ಕೊಡಬಹುದಿತ್ತು. ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದರು. ಆದರೆ ಅವರನ್ನು ಕರೆದುಕೊಂಡು ಬಂದು ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನು ರೀತಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.
ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ:''ಪ್ರಕರಣದಿಂದ ಬಚಾವಾಗಲು ದರ್ಶನ್ ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿ, ನನಗೆ ತಿಳಿದ ಮಟ್ಟಿಗೆ ಯಾರೂ ಪ್ರಯತ್ನ ಮಾಡಿಲ್ಲ. ನನ್ನ ಹತ್ತಿರವಂತೂ ಯಾರೂ ಬಂದಿಲ್ಲ. ಕಾನೂನು ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಲು ಅವಕಾಶವಿದೆಯೋ ಅದನ್ನು ತೆಗೆದುಕೊಳ್ಳುತ್ತಾರೆ. ಸರ್ಕಾರದಿಂದ ನಾವ್ಯಾರೂ ಮಧ್ಯಪ್ರವೇಶಿಸಲ್ಲ. ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ'' ಎಂದು ತಿಳಿಸಿದರು.
ರೇಣುಕಾಸ್ಚಾಮಿ ಕುಟುಂಬದವರ ಜೊತೆ ಸರ್ಕಾರ ನಿಲ್ಲುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ರೇಣುಕಾಸ್ವಾಮಿ ಕುಟುಂಬದ ಪರವಾಗಿ ಸರ್ಕಾರ ಏನು ಮಾಡಬಹುದು ಅನ್ನೋದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ'' ಎಂದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಹತ್ಯೆಯಲ್ಲಿ ಯಾರ ಪಾತ್ರ ಏನು? ದರ್ಶನ್ ಅಂಡ್ ಟೀಂ ವಿಚಾರಣೆ - Renukaswamy Murder Case
ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ದರ್ಶನ್ ಅವರದ್ದು ಇದು ಮೊದಲ ಪ್ರಕರಣ ಅಲ್ಲ. ಈ ಹಿಂದೆಯೂ ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ತನಿಖೆ ಆದ ನಂತರ ಏನು ಶಿಫಾರಸ್ಸು ಮಾಡುತ್ತಾರೆಂಬುದನ್ನು ನೋಡಬೇಕು. ಪೊಲೀಸರೇ ಸಮರ್ಥರು. ಅವರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ನಮ್ಮನ್ನು ಕೇಳಿ ಸೆಕ್ಷನ್ ಹಾಕೋದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಿಂದ ಸುದ್ದಿಯಾದರೇ ದರ್ಶನ್? ಈವರೆಗಿನ ಘಟನೆಗಳು ಇವು! - Darshan Controversies
ಕೊಲೆ ಆರೋಪಿಗಳಿಗೆ ಬಿರಿಯಾನಿ ತರಿಸಿ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಗೊತ್ತಿಲ್ಲ. ಊಟ ಕೊಡದೇ ಸಾಯಿಸಲು ಆಗಲ್ಲ. ಊಟ ತರಿಸಿ ಕೊಡುತ್ತಾರೆ. ಅದರಲ್ಲಿ ಬಿರಿಯಾನಿ ತರಿಸಿಕೊಟ್ರಾ? ಚಿಕನ್ ತರಿಸಿಕೊಟ್ರಾ? ಗೊತ್ತಿಲ್ಲ ಎಂದು ಹೇಳಿದರು.