ಉಡುಪಿ: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಕೂಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ನದಿಗಳು ತುಂಬಿ ಹರಿಯುತ್ತಿವೆ. ಆ.2ರಂದೂ ಸಹ ರೆಡ್ ಅಲರ್ಟ್ ಘೋಷಿಸಲಾಗಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಉಳಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಹಾಗೂ ಐಟಿಐಗಳಿಗೆ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡದಲ್ಲೂ ರಜೆ ವಿಸ್ತರಣೆ: ಜಿಲ್ಲೆಯಾದ್ಯಂತ ಮಳೆ ಮುಂದುವರಿಕೆ ಮತ್ತು ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದ ಕಾರಣ ಮುಂಜಾಗೃತಾ ಕ್ರಮವಾಗಿ ಶುಕ್ರವಾರವೂ ಜಿಲ್ಲೆಯ ಕರಾವಳಿ ಹಾಗೂ ಕೆಲ ಮಲೆನಾಡು ಭಾಗದ ತಾಲೂಕುಗಳ ಶಾಲೆಗೆ ರಜೆ ನೀಡಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ ಹಾಗೂ ದಾಂಡೇಲಿ ತಾಲೂಕಿನ ಅಂಗನವಾಡಿ, ಶಾಲೆ, ಐಟಿಐ, ಡಿಪ್ಲೊಮಾ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಜೆ: ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ಆ.2ರಂದು ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಆ.2ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ.
ದುರ್ಬಲ, ಶಿಥಿಲ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ, ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸಬೇಕು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು ಎಂದು ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಮತ್ತು ವಿದ್ಯುತ್ ಕಂಬ/ತಂತಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವುದು. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಲಿದೆ ಮಳೆ ಆರ್ಭಟ; ಈ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ - MET Rain Alert