ಮಂಗಳೂರು: ಲೋಕಸಭಾ ಚುನಾವಣೆಗೆ ವೇದಿಕೆ ಸಿದ್ದವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮೂರು ದಶಕಗಳ ಹಿಂದೆ ಕಾಂಗ್ರೆಸ್ನ ಕೋಟೆ. ಮೂರು ದಶಕಗಳಿಂದೀಚೆಗೆ ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತನೆಗೊಂಡಿದೆ. ನಿರೀಕ್ಷೆಯಂತೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಹೊಸಬರು ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಪರಿಣಾಮ ಕ್ಷೇತ್ರದಲ್ಲಿ ಸಹಜವಾಗಿ ಗೆಲ್ಲುವ ಹೊಸ ಅಭ್ಯರ್ಥಿ ಯಾರು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿಗಳು ಯಾರೇ ಇದ್ದರೂ ಪಕ್ಷಾಧಾರಿತವಾಗಿ ಚುನಾವಣೆ ನಡೆಯುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಅಭ್ಯರ್ಥಿಗಳ ಪ್ರಭಾವ ಕಡಿಮೆಯಾಗಿರುವ ಈ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಯಾರಿಗೆ ಎಂಬುದು ಕುತೂಹಲ ಮೂಡಿಸಿದೆ.
ಈ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ. ಬೃಜೇಶ್ ಚೌಟ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಸ್ಪರ್ಧಿಸುತ್ತಿದ್ದಾರೆ. ಇವರಿಬ್ಬರಲ್ಲಿ ಯಾರೇ ಗೆಲುವು ಕಂಡರು ಹೊಸಬರ ಗೆಲುವಾಗಲಿದೆ. ಈ ಇಬ್ಬರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವುದು ಇನ್ನೊಂದು ವಿಶೇಷ.
ಕ್ಷೇತ್ರದ ಇತಿಹಾಸ ನೋಡಿದರೆ ಈ ಕ್ಷೇತ್ರ 2008ರ ಕ್ಷೇತ್ರ ಮರುವಿಂಗಡಣೆಯವರೆಗೆ ಮಂಗಳೂರು ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಈ ಕ್ಷೇತ್ರದಲ್ಲಿ ಉಳ್ಳಾಲ, ಮಂಗಳೂರು, ವಿಟ್ಲ, ಪುತ್ತೂರು , ಸುಳ್ಯ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ವಿಧಾನಸಭೆ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದ್ದವು. ಕೊಡಗು ಜಿಲ್ಲೆಯ ಮೂರು ಕ್ಷೇತ್ರಗಳು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೂ, ಬಂಟ್ವಾಳ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಸೇರಿಕೊಂಡಿದ್ದವು. 2009ರ ಚುನಾವಣೆಗೆ ಮಂಗಳೂರು ಲೋಕಸಭಾ ಕ್ಷೇತ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಎಂದು ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಾದ ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು ಕ್ಷೇತ್ರಗಳು ಇದರ ವ್ಯಾಪ್ತಿಗೆ ಬಂದಿದೆ. ಸದ್ಯ ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಇರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರದಲ್ಲಿ ಬಿಜೆಪಿ, ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದುಕೊಂಡಿದೆ.
1951 ರಿಂದ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 9 ಬಾರಿ ನಿರಂತರ ಗೆಲುವು ಸಾಧಿಸಿದ್ದರೆ, ಆ ಬಳಿಕದ 8 ಚುನಾವಣೆಯಲ್ಲಿ ಇದುವರೆಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಹಿಡಿತ ಸಾಧಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷ ಹೊರತುಪಡಿಸಿದರೆ ಇತರ ಪಕ್ಷಗಳು ಯಾವುದೇ ಆ ಪ್ರಮಾಣದಲ್ಲಿ ಪ್ರಭಾವ ಮೂಡಿಸಿಲ್ಲ.
ಈ ಕ್ಷೇತ್ರದಲ್ಲಿ ಬಿಲ್ಲವ, ಬಂಟ ಸಮುದಾಯ ಪ್ರಾಬಲ್ಯ ಹೊಂದಿದ್ದರೂ, 1991ರ ಬಳಿಕ ಜಾತಿ ಆಧಾರಿತವಾಗಿ ಚುನಾವಣೆ ನಡೆದಿಲ್ಲ. ಈ ಕ್ಷೇತ್ರದಲ್ಲಿ ಹಿಂದುತ್ವದ ಅಲೆ ಬಿಜೆಪಿಯ ಮತಬ್ಯಾಂಕನ್ನು ಹೆಚ್ಚಿಸಿದೆ. 1991ರ ಬಳಿಕ ಕ್ಷೇತ್ರದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಜೈನ ಸಮುದಾಯದ ಧನಂಜಯ ಕುಮಾರ್ 4 ಬಾರಿ ಗೆದ್ದಿರುವುದು ಮತ್ತು ಪ್ರಬಲ ಸಮುದಾಯದ ಜನಾರ್ದನ ಪೂಜಾರಿ ಸೋತಿರುವುದು ಇಲ್ಲಿನ ಜನ ಜಾತಿಗೆ ಪ್ರಾಮುಖ್ಯತೆ ನೀಡದೇ ಪಕ್ಷಕ್ಕೆ ಪ್ರಾಬಲ್ಯ ನೀಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ನಿಂದ ಜನಾರ್ದನ ಪೂಜಾರಿ 4 ಬಾರಿ, ಬಿಜೆಪಿಯಿಂದ ಧನಂಜಯ ಕುಮಾರ್ 4 ಬಾರಿ ಗೆದ್ದಿದ್ದಾರೆ. ಇದೀಗ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಬಿಜೆಪಿಯಿಂದ 3 ಬಾರಿ ಗೆದ್ದಿದ್ದಾರೆ. ಮಾಜಿ ಸಿಎಂ ಡಿವಿ ಸದಾನಂದಗೌಡ ಗೆದ್ದ ಬಳಿಕ ಅವರು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ವಲಸೆ ಹೋದರು.
ಕ್ಷೇತ್ರದಲ್ಲಿ ಈ ಬಾರಿ 8,73,380 ಪುರುಷ ಮತದಾರರು, 9,12,369 ಮಹಿಳಾ ಮತದಾರರು, 77 ಇತರ ಮತದಾರರು ಸೇರಿ 1,785,826 ಮತದಾರರು ಇದ್ದಾರೆ.
ಬಿಜೆಪಿ ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಹಿಂದುತ್ವ ವಿಚಾರವನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಪ್ರತೀ ಬಾರಿಯ ಚುನಾವಣೆಯಲ್ಲಿಯೂ ಹಿಂದುತ್ವ ವಿಚಾರ ಮುನ್ನೆಲೆಗೆ ಬರುತ್ತದೆ. ಬಿಜೆಪಿಯ ಬೆನ್ನಿಗೆ ಸಂಘ ಪರಿವಾರದ ಕಾರ್ಯಕರ್ತರು ಹಿಂದುತ್ವ ವಿಚಾರವನ್ನು ಮನೆ ಮನೆಗೆ ತಲುಪಿಸುತ್ತಾರೆ. ಇನ್ನೂ ಕಾಂಗ್ರೆಸ್ ಮೂರು ದಶಕಗಳ ಹಿಂದೆ ಕ್ಷೇತ್ರದ ಅಭಿವೃದ್ಧಿ ಮಾಡಿದ ಕಾಂಗ್ರೆಸ್ ಸಂಸದರ ಕೊಡುಗೆಗಳನ್ನು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿದೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಎರಡು ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕದನ ಕುತೂಹಲ ಮೂಡಿಸಿದೆ.
ಕೊನೆ ಚುನಾವಣೆಯ ಹಣಾಹಣಿ ಹೀಗಿತ್ತು: 2019ರಲ್ಲಿ ಕ್ಷೇತ್ರದಲ್ಲಿ ಒಟ್ಟು 1,724,976 ಮತದಾರರಿದ್ದರು. ಒಟ್ಟು ಮಾನ್ಯ ಮತಗಳ ಸಂಖ್ಯೆ 1,337,659, 774,285 ಮತಗಳನ್ನು ಪಡೆದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೆದ್ದು ಈ ಕ್ಷೇತ್ರದಿಂದ ಸಂಸದರಾದರೆ, 499,664 ಮತಗಳೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ಎಂ ರೈ ಎರಡನೇ ಸ್ಥಾನಕ್ಕೆ ಕುಸಿದರು. 7,380 ನೋಟಾ ಮತಗಳು ಚಲಾವಣೆಯಾಗಿವೆ. ನಳಿನ್ ಕುಮಾರ್ ಕಟೀಲ್ ಅವರು ಮಿಥುನ್ ರೈ ಅವರನ್ನು ಸೋಲಿಸುವ ಮೂಲಕ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮೊದಲ ಹಂತಕ್ಕೆ ಭರ್ಜರಿ ಮತಬೇಟೆ; 2ನೇ ಹಂತಕ್ಕೆ ಇಂದು ಅಧಿಸೂಚನೆ - Lok Sabha Election 2nd Phase