ಹುಬ್ಬಳ್ಳಿ: ಕಳೆದ ವರ್ಷ ರಾಜ್ಯ ಬರಗಾಲದಿಂದ ರಾಜ್ಯ ತತ್ತರಿಸಿತ್ತು. ಅದರಲ್ಲೂ ಜನರು ಮಳೆ ಕೊರತೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸಿದ್ದರು. ಆ ಪರಿಯ ಅನಾವೃಷ್ಟಿಯನ್ನು ಕಂಡಿದ್ದ ರಾಜ್ಯಕ್ಕೆ ಈಗ ಅತಿವೃಷ್ಟಿ ಕಾಡುತ್ತಿದೆ. ಇದರಿಂದ ಮನೆ ಕುಸಿತ, ಗುಡ್ಡ ಕುಸಿತದಂತಹ ಘಟನೆಗಳು ವರದಿಯಾಗುತ್ತಿವೆ. ಇನ್ನೂ ಕೆಲವೆಡೆ ಸರ್ಕಾರಿ ಕಚೇರಿಗಳು ಸಹ ಸೋರಲಾರಂಭಿಸಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮಿಷನರ್ ಕಚೇರಿ ಮೇಲಿರುವ ಸಭಾಂಗಣದ ಮೇಲ್ಛಾವಣಿ ಸೋರುತ್ತಿದೆ. ತೇಪೆ ಹಾಕುವ ರೀತಿಯಲ್ಲಿ ಪ್ಲಾಸ್ಟಿಕ್ ಹಾಳೆ ಹೊದಿಸಿದ್ದರೂ ಕೂಡ ಸೋರುವುದು ಮಾತ್ರ ನಿಂತಿಲ್ಲ!
ಈ ಕಟ್ಟಡ ಬ್ರಿಟಿಷ್ ಕಾಲದ ವಾಸ್ತು ಶೈಲಿಯನ್ನು ಹೊಂದಿದ್ದು, ಸಂಪೂರ್ಣ ಕಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ. ಪುರಾತನ ಹಾಗೂ ಪಾರಂಪರಿಕ ಕಟ್ಟಡವೂ ಇದಾಗಿದ್ದರಿಂದ ಸತತ ಮಳೆಗೆ ಕಟ್ಟಿಗೆಗಳು ನೆನೆಯುವ ಭೀತಿ ಶುರುವಾಗಿದೆ. ಪಾಲಿಕೆಯ ಕಮಿಷನರ್, ವಲಯ ಆಯುಕ್ತರು, ಇಂಜಿನಿಯರ್ ಸೇರಿದಂತೆ ಎಲ್ಲರೂ ಇದೇ ಸಭಾಂಗಣದಲ್ಲಿ ಸಭೆಗಳನ್ನು ನಡೆಸುತ್ತಾರೆ. ಸದ್ಯ ಮಳೆಗೆ ಅಲ್ಲಲ್ಲಿ ಸೋರುತ್ತಿರುವುದರಿಂದ ಆತಂಕ ಶುರುವಾಗಿದೆ.
ಈ ಬಗ್ಗೆ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ್ ಪ್ರತಿಕ್ರಿಯೆ ನೀಡಿದ್ದು, ಕಟ್ಟಡ ಸೋರುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದೊಂದು ಅತ್ಯಂತ ಹಳೆಯ ಮತ್ತು ಐತಿಹಾಸಿಕ ಕಟ್ಟಡವಾಗಿದೆ. ಇದನ್ನು ಕಾಪಾಡುವದು ನಮ್ಮ ಜವಾಬ್ದಾರಿ. ರಿಪೇರಿ ಮಾಡಲು ಪಾಲಿಕೆ ಕಮಿಷನರ್ ಅವರಿಗೆ ತಿಳಿಸುವುದಾಗಿ ಹೇಳಿದ್ದಾರೆ.
ಅತೀ ದೊಡ್ಡ ಮಹಾನಗರ ಪಾಲಿಕೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅತ್ಯಂತ ಪುರಾತನ ಮತ್ತು ಪಾರಂಪರಿಕ ಕಟ್ಟಡ ಕೂಡ ಇದಾಗಿದೆ. 1962ರಿಂದ ಇಲ್ಲಿಯವರೆಗೂ ಪಾಲಿಕೆ ಇದೇ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಿಕೊಂಡು ಬರುತ್ತಿದೆ. ಆದರೆ, ಇಂತಹ ಪುರಾತನ ಹಾಗೂ ಪಾರಂಪರಿಕ ಕಟ್ಟಡ ಈಗ ಸೋರುತ್ತಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ಐತಿಹಾಸಿಕ ಪರಂಪರೆಯ ಕಟ್ಟಡಗಳು: ಬ್ರಿಟಿಷರು ಆಡಳಿತ, ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿ, ಮಹತ್ವದ ಕಟ್ಟಡಗಳನ್ನು ನಿರ್ಮಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಆಗಿನ ಕಾಲದಲ್ಲಿ ಮಾಡಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಈಗಲೂ ಹಲವು ಕಟ್ಟಡಗಳಿವೆ. ಧಾರವಾಡ ಮತ್ತು ಹುಬ್ಬಳ್ಳಿಯ ಶ್ರೀಮಂತ ಪರಂಪರೆಯ ಇತಿಹಾಸವನ್ನು ಈಗಲೂ ಸಾರುತ್ತಿವೆ. ಹುಬ್ಬಳ್ಳಿ-ಧಾರವಾಡದ ಕಾರ್ಪೊರೇಷನ್ ಕಟ್ಟಡ, ಟೌನ್ ಹಾಲ್, ಕಾರ್ಪೊರೇಷನ್ ಆಸ್ಪತ್ರೆ, ವಿದ್ಯಾವರ್ಧಕ ಸಂಘ, ಡಯಟ್, ಮಹಿಳಾ ಶಿಕ್ಷಣ ತರಬೇತಿ ಕಾಲೇಜು(ಡಯಟ್) ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿವೆ.
ಇದನ್ನೂ ಓದಿ: ದಾವಣಗೆರೆ: ಸತತ ಮಳೆಯಿಂದ ಸೋರುತ್ತಿರುವ ಪೊಲೀಸ್ ಠಾಣೆ! - WATER LEAKAGE IN POLICE STATION