ಬೆಂಗಳೂರು: ಹಿಜಾಬ್ ಕುರಿತಂತೆ ಆದೇಶ ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯ ಆಂಗ್ಲ ಭಾಷೆಯ ಅನುವಾದಿತ ಪ್ರತಿಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ಆರೋಪಿಗಳಾದ ಆರ್.ರಹಮತುಲ್ಲಾ ಮತ್ತು ಜಮಾಲ್ ಮೊಹಮ್ಮದ್ ಉಸ್ಮಾನ್ ಅವರು ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯನ್ನು ಆಂಗ್ಲಭಾಷೆಯಲ್ಲಿ ಒದಗಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೇಲನ್, ನಮ್ಮ ಕಕ್ಷಿದಾರರಿಗೆ ಕನ್ನಡ ಭಾಷೆ ಅರ್ಥವಾಗುವುದಿಲ್ಲ, ಓದಲು ಅಥವಾ ಬರೆಯಲು ಬರುವುದಿಲ್ಲ. ಆದ್ದರಿಂದ ಆಂಗ್ಲ ಭಾಷೆಯಲ್ಲಿ ಪ್ರತಿಗಳನ್ನು ಒದಗಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು. ವಕೀಲರಾಗಿರುವ ನನಗೆ ಕನ್ನಡ ಭಾಷೆಯನ್ನು ಕೇವಲ ಮಾತನಾಡುತ್ತೇನೆ. ಆದರೆ, ತಮಗೆ ಕನ್ನಡದಲ್ಲಿ ಓದಲು ಮತ್ತು ಬರೆಯಲು ಬರುವುದಿಲ್ಲ ಎಂದು ವಿವರಿಸಿದ್ದರು.
ಅಲ್ಲದೇ, ಸಿಬಿಐ ವಿರುದ್ಧದ ನರೋತ್ತಮ್ ಧಾಕಡ್ ಪ್ರಕರಣದಲ್ಲಿ ಅಗತ್ಯವಿದ್ದರೆ ಮತ್ತು ಆರೋಪಿಗಳ ವಿರುದ್ಧದ ಆರೋಪ ಪಟ್ಟಿಯಲ್ಲಿ ಹೇಳಲಾದ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಿದರೆ, ಅನುವಾದಿತ ಆವೃತ್ತಿಯನ್ನು ಒದಗಿಸುವುದು ಅಗತ್ಯವಾಗುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆದ್ದರಿಂದ ನಮಗೆ ಆಂಗ್ಲಭಾಷೆಯ ಪ್ರತಿ ಒದಗಿಸಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ, ಆರೋಪಪಟ್ಟಿ ಭಾಷಾಂತರ ಪ್ರತಿಗಳು ಮತ್ತು ಆರೋಪಪಟ್ಟಿಯಲ್ಲಿ ಸೇರಿಸಿರುವ ವಿಷಯಗಳನ್ನು ಆಂಗ್ಲ ಭಾಷೆಯಲ್ಲಿ ಅರ್ಜಿದಾರರ ವಕೀಲರಿಗೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯಗಳ ವಿಚಾರಣೆ ನಡೆಸಿದ ಹೈಕೋರ್ಟ್, ಹಿಜಾಬ್ ಕಡ್ಡಾಯವಲ್ಲ ಎಂದು ತಿಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ತಮಿಳುನಾಡು ತೌಹೀದ್ ಜಮಾತ್ ಸಮಿತಿ ಸದಸ್ಯರಾಗಿದ್ದ ಅರ್ಜಿದಾರರು ಮಧುರೈನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ಹಿಜಾಬ್ ತೀರ್ಪು ನೀಡಿದ್ದ ನ್ಯಾಯಾಧೀಶರಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಮಧುರೈನಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಭಾಷಣದ ವಿಡಿಯೋ ವ್ಯಾಪಕವಾಗಿ ಪ್ರಸಾರವಾಗಿತ್ತು. ಬಳಿಕ ಸುಧಾ ಕಟ್ವಾ ಎಂಬುವರು ಬೆಂಗಳೂರಿನ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಯುಎಪಿಎ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.