ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರ ನೇಮಕಾತಿ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಪ್ರೊ.ಎನ್.ಕೆ. ಲೋಕನಾಥ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿ, ನೇಮಕಾತಿಯನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಲೋಕನಾಥ್ ಕುಲಪತಿಯಾಗಿ ಮುಂದುವರಿಯುವುದು ಅಬಾಧಿತವಾದಂತಾಗಿದೆ.
ಪ್ರಕರಣದ ಹಿನ್ನೆಲೆ: ಮೈಸೂರು ವಿವಿ ಕುಲಪತಿ ಹುದ್ದೆಗೆ ಲೋಕನಾಥ್ ಅವರನ್ನು ನೇಮಕ ಮಾಡಿ 2023ರ ಮಾರ್ಚ್ 23ರಂದು ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಪ್ರೊ.ಶರತ್ ಅನಂತಮೂರ್ತಿ ಮತ್ತು ಡಾ.ಜಿ.ವೆಂಕಟೇಶ್ ಕುಮಾರ್ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಅರ್ಜಿಗಳನ್ನು ಸಲ್ಲಿಸಿದ್ದರು.
ಕುಲಪತಿ ನೇಮಕಾತಿ ಪ್ರಕ್ರಿಯೆಯಲ್ಲಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ–2000 ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳನ್ನು ಅನುಸರಿಸಿಲ್ಲ ಎಂದು ಆಕ್ಷೇಪಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ನೇಮಕಾತಿ ರದ್ದುಗೊಳಿಸಿ 2023ರ ಸೆಪ್ಟೆಂಬರ್ 12ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಲೋಕನಾಥ್ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೊದಲು ಈ ಮೇಲ್ಮನವಿ ವಿಚಾರಣೆ ನಡೆಸಿದ್ದ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ಪೀಠ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದೀಗ ನೇಮಕಾತಿಯನ್ನು ಎತ್ತಿ ಹಿಡಿದಿದೆ.
ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ: ನಲಪಾಡ್ ವಿರುದ್ಧದ ಪ್ರಕರಣ ರದ್ದು ಪಡಿಸಿದ ಹೈಕೋರ್ಟ್