ಬೆಂಗಳೂರು: ನಗರದ ಶಿವರಾಮ ಕಾರಂತ ಬಡಾವಣೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿಯನ್ನು ವಿಸರ್ಜನೆ ಮಾಡಿರುವ ಹೈಕೋರ್ಟ್, ಸ್ವತಃ ತಾನೇ ಮೇಲ್ವಿಚಾರಣೆ ನಡೆಸಲು ನಿರ್ಧರಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚನೆಯಾಗಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಈ ನಿರ್ಧಾರಕ್ಕೆ ಬಂದಿದೆ. ಪ್ರಕರಣ ಸಂಬಂಧ 2023ರ ಡಿಸೆಂಬರ್ 12ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಸಮಿತಿ ಮುಂದುವರೆಸುವುದು /ವಿಸರ್ಜನೆ ಮಾಡುವುದು ಹೈಕೋರ್ಟ್‌ನ ವಿವೇಚನೆ ಬಿಟ್ಟದ್ದು ಎಂದು ತಿಳಿಸಿದೆ. ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರೂ ಸಹ ಸಮಿತಿ ಮುಂದುವರೆಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನ್ಯಾಯಪೀಠ ತಿಳಿಸಿತು.
ವಿಚಾರಣೆಯಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಸುಪ್ರೀಂ ಕೊರ್ಟ್ ನಿಗದಿಪಡಿಸಿದ ಕೆಲಸವನ್ನು ಕಾರ್ಯಗತಗೊಳಿಸಲು ಸಮಿತಿ ನಡೆಸಿ ಕಾರ್ಯ ಕಲಾಪಗಳಿಗೆ ಸಿಬ್ಬಂದಿಯ ವೇತನವೂ ಸೇರಿದಂತೆ 17,95,10,448 ರೂ.ಗಳು ವೆಚ್ಚವಾಗಿದೆ. ಸಮಿತಿಯ ಪ್ರಕ್ರಿಯೆಯ ದತ್ತಾಂಶಗಳನ್ನು ಸಂಗ್ರಹಿಸುವುದಕ್ಕಾಗಿ ಏಜನ್ಸಿಯೊಂದಕ್ಕೆ 3 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ. ಈ ದತ್ತಾಂಶ ಅಭಿವೃದ್ಧಿ ನಿರ್ವಹಣೆಗೆ 3 ವರ್ಷಗಳಿಂದ 3 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ವೆಚ್ಚ ಮಾಡಲಾಗಿದೆ. ಈ ವೆಚ್ಚ ಬಿಡಿಎ ಅಥವಾ ಸಮಿತಿ ಭರಿಸಿಲ್ಲ. ಆದರೆ, ಸಾರ್ವಜನಿಕರ ಹಣ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ಸಮಿತಿಗಾಗಿ ಈಗಾಗಲೇ ಸುಮಾರು 18 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ಮುಂದಿನ ವೆಚ್ಚವನ್ನು ನಿಲ್ಲಿಸುವುದಕ್ಕಾಗಿ ನ್ಯಾಯಲಯವೇ ಮೇಲ್ವಿಚಾರಣೆ ಮಾಡುವುದು ಸೂಕ್ತ ಕ್ರಮವಾಗಿದೆ. ಇದರಿಂದ ಪ್ರತ್ಯೇಕವಾಗಿ ಸಮಿತಿಗೆ ವೆಚ್ಚ ಮಾಡುವ ಅಗತ್ಯ ಎದುರಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಈ ಸಮಿತಿ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ಮೇಲ್ವಿಚಾರಣೆ ಬಳಿಕ ಅದನ್ನು ಕಾರ್ಯಗತಗೊಳಿಸಬಹುದು. ಆದ್ದರಿಂದ ಸಮಿತಿ ವಿಸರ್ಜನೆ ಮಾಡುವಂತೆ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಒಪ್ಪಿಕೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಸಮಿತಿಯ ದಾಖಲೆಗಳ ದತ್ತಾಂಶವನ್ನು ಸಂಗ್ರಹಿಸಿರುವ ಕಚೇರಿಯ ಆವರಣವನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮತ್ತು ಹೈಕೋರ್ಟ್‌ನ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಮಿತಿಯ ಕಚೇರಿಯಲ್ಲಿನ ದಾಖಲೆಗಳ ದಾಸ್ತಾನು ಮಾಡಿ ಈಗಾಗಲೇ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ದತ್ತಾಂಶವನ್ನು ವಶಕ್ಕೆ ಪಡೆದುಕೊಳ್ಳಬೇಕು. ಮತ್ತು ಹೈಕೋರ್ಟ್‌ಗೆ ಸಮಿತಿ ನಿರ್ವಹಣೆ ಮಾಡುವ ವಿಭಾಗಕ್ಕೆ ವರ್ಗಾವಣೆ ಮಾಡಬೇಕು. ಈ ಎಲ್ಲ ದಾಖಲೆಗಳು ನ್ಯಾಯಾಲಯದ ವಶದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ತಿಳಿಸಿದೆ.
ಜೊತೆಗೆ, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನ ಅಧೀನದಲ್ಲಿರುವ ದಾಖಲೆಗಳನ್ನು ಹಸ್ತಾಂತರಿಸುವಂತೆ ಸುಪ್ರೀಂ ಕೊರ್ಟ್‌ನ ಅಧಿಕಾರಿಗಳೊಂದಿಗೆ ಸಂವಹನ ನಡೆಸುವಂತೆ ನ್ಯಾಯಪೀಠ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದೆ.
ಇದನ್ನೂ ಓದಿ: ಎನ್ಸಿಹೆಚ್ ಅಧ್ಯಕ್ಷ ಸ್ಥಾನದಿಂದ ಡಾ. ಅನಿಲ್ ಖುರಾನಾ ನೇಮಕಾತಿ ರದ್ದುಪಡಿಸಿದ ಹೈಕೋರ್ಟ್