ಬೆಂಗಳೂರು: ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಯೊಬ್ಬನೊಂದಿಗೆ ಅಸಹಜ ರೀತಿಯಲ್ಲಿ ಫೋಟೋ, ವಿಡಿಯೋ ಕ್ಲಿಕ್ಕಿಸಿಕೊಂಡ ಮುಖ್ಯ ಶಿಕ್ಷಕಿ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಶಿಕ್ಷರಾಗುವವರೆಗೂ ಈ ರೀತಿಯ ಕೆಲಸ ಅನಪೇಕ್ಷಿತವಾದದ್ದು ಎಂದು ತಿಳಿಸಿದೆ.
ತಮ್ಮ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಸಂಬಂಧ ವಿಚಾರಣಾ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿ, ತಮ್ಮನ್ನು ಪ್ರಕರಣದಿಂದ ಕೈಬಿಡುವಂತೆ ಸಲಹೆ ನೀಡಿತು.
ಅಲ್ಲದೇ, ಈ ಸಂಬಂಧ ಮುಂದಿನ ವಿಚಾರಣೆ ವೇಳೆ ಪ್ರಕರಣ ಕುರಿತ ಆರೋಪಗಳನ್ನು ಕೈ ಬಿಡಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಅಭಿಪ್ರಾಯ ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಕೀಲರ ವಾದ ಹೀಗಿತ್ತು: ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ''ಅರ್ಜಿದಾರರು ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದಾರೆ. ಶೈಕ್ಷಣಿಕ ಪ್ರವಾಸದ ವೇಳೆ ಶಿಕ್ಷಕಿ ವಿದ್ಯಾರ್ಥಿಯೊಬ್ಬನೊಂದಿಗೆ ಕೆಲ ಫೋಟೋ ತೆಗೆದುಕೊಂಡ ಕಾರಣ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ'' ಎಂದು ಮಾಹಿತಿ ನೀಡಿದರು.
ಅಲ್ಲದೆ, ''ಸ್ವಾಮಿ.. ಫೋಟೋಗಳು ಅಹಜವಾಗಿಯೇ ಇವೆ. ಆದರೆ, ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ತಾಯಿ - ಮಗನ ಸಂಬಂಧವಿದೆ. ವಿದ್ಯಾರ್ಥಿಗೆ ಅರ್ಜಿದಾರರು ಕೇರ್ ಟೇಕಿಂಗ್ ಶಿಕ್ಷಕಿಯಾಗಿದ್ದಾರೆ'' ಎಂದು ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ''ಪ್ರಕರಣದ ದಾಖಲೆಗಳನ್ನು ನಾನು ಓದಿದ್ದೇನೆ. ಏನಿದು ಶಿಕ್ಷಕಿ ಮಾಡಿರುವ ಕೆಲಸ? ಏಕೆ ಹಾಗೆ ಮಾಡಿದ್ದಾರೆ? ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಡ್ಯೂಯೆಟ್ ಹಾಡುತ್ತಿದ್ದರೇ? ಇದು ಶಿಕ್ಷಕಿ ಮಾಡುವ ಕೆಲಸವೇ?'' ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೇ, ''ಏನ್ ಸಾರ್. ಅವು ಕೇರ್ ಟೇಕಿಂಗ್ ಚಿತ್ರಗಳೇ?'' ಎಂದು ಮರು ಪ್ರಶ್ನೆ ಹಾಕಿದರು.
ವಾದ ಮುಂದುವರೆಸಿದ ಅರ್ಜಿದಾರರು ಪರ ವಕೀಲರು, ''ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವೆ ಯಾವುದೇ ಲೈಂಗಿಕ ಉದ್ದೇಶವಿರಲಿಲ್ಲ. ಅರ್ಜಿದಾರರ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು 12ರ ಅಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಾರ, ಸೆಕ್ಷನ್ 8 ಮತ್ತು 12ರ ಅಡಿಯ ಅಪರಾಧವು ಅನ್ವಯವಾಗಬೇಕಾದರೆ ಲೈಂಗಿಕ ಉದ್ದೇಶ ಇರಬೇಕಾಗುತ್ತದೆ. ಇಡೀ ದೋಷಾರೋಪ ಪಟ್ಟಿಯಲ್ಲಿ ಎಲ್ಲಿಯೂ ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ಲೈಂಗಿಕ ಉದ್ದೇಶವಿತ್ತು ಎಂದು ಉಲ್ಲೇಖಿಸಿಲ್ಲ. ಪ್ರಕರಣದ 7ನೇ ಸಾಕ್ಷಿ ಸಹ ಅರ್ಜಿದಾರೆ ಮತ್ತು ವಿದ್ಯಾರ್ಥಿ ನಡುವೆ ಲೈಂಗಿಕ ಉದ್ದೇಶವಿರಲಿಲ್ಲ ಎಂದು ಸಾಕ್ಷ್ಯ ನುಡಿದಿದ್ದಾರೆ'' ಎಂದು ತಿಳಿಸಿದರು.
ಅರ್ಜಿದಾರರರ ಪರ ವಕೀಲರಿಗೆ ಜಡ್ಜ್ ಕೇಳಿದ ಪ್ರಶ್ನೆ ಹೀಗಿತ್ತು: ಆ ವಾದ ಒಪ್ಪದ ನ್ಯಾಯಮೂರ್ತಿಗಳು, ''ಹಾಗಾದರೆ ಕ್ಯಾಶುವಲ್ ಉದ್ದೇಶವಿತ್ತೇ?'' ಎಂದು ಮತ್ತೊಂದು ಪ್ರಶ್ನೆ ಎಸೆದರು. ಹಾಗೆಯೇ, ''ಆ ಪೋಟೋಗಳನ್ನು ನೋಡಿ, ಮತ್ತೆ ತಾಯಿ ಮತ್ತು ಮಗನ ಸಂಬಂಧ ಎಂದು ಹೇಳಬೇಡಿ. ವಿದ್ಯಾರ್ಥಿಯೊಂದಿಗೆ ಸೆಲ್ಫಿ, ವಿಡಿಯೋ ಅರ್ಜಿದಾರೆಗೆ ಏಕೆ ಬೇಕಿತ್ತು? ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದೇನಿತ್ತು? ಏಕೆ ಫೋನ್ನಲ್ಲಿ ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡಿದ್ದರು?'' ಎಂದು ಪ್ರಶ್ನೆಗಳ ಸುರಿಮಳೆಗೈದರು.
ಆಗ ಅರ್ಜಿದಾರರ ಪರ ವಕೀಲರು, ''ಶಿಕ್ಷಕಿ ಅಪ್ಲೋಡ್ ಮಾಡಿಲ್ಲ. ಕೆಲ ಸಾಕ್ಷಿಗಳು ಅಪ್ಲೋಡ್ ಮಾಡಿದ್ದಾರೆ. ಅರ್ಜಿದಾರರ ನಡೆ ವಿಪರೀತವಾಗಿದೆ ಎನ್ನುವುದು ಒಪ್ಪುತ್ತೇನೆ. ಆದರೆ, ನಿಜವಾಗಿಯೂ ಅವರ ಮಧ್ಯೆ ಲೈಂಗಿಕ ಉದ್ದೇಶವಿರಲಿಲ್ಲ. ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ವಿಪರೀತ ಉತ್ಸಾಹದಿಂದ ಘಟನೆ ನಡೆದಿದೆ'' ಎಂದರು.
ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು: ಅದರಿಂದ ಮತ್ತೆ ಬೇಸರಗೊಂಡ ನ್ಯಾಯಮೂರ್ತಿಗಳು, ''ಏನದು ವಿದ್ಯಾರ್ಥಿ ಜೊತೆಗೆ ವಿಪರೀತ ಉತ್ಸಾಹ? ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎಂದು ಕರೆಯಲಾಗುತ್ತದೆಯೇ? ಶಿಕ್ಷಕಿಯಾದವರು ಮಾಡಲೇಬಾರದ ಕೆಲಸವಿದು. ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗದು. ಆರೋಪಗಳನ್ನು ಕೈ ಬಿಡಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು'' ಎಂದು ಸೂಚನೆ ನೀಡಿ, ಆಗಸ್ಟ್ 8ಕ್ಕೆ ವಿಚಾರಣೆ ಮುಂದೂಡಿದರು.