ಬೆಂಗಳೂರು: ಲೋಕಸಭೆ ಚುನಾವಣೆಯ ವೇಳೆ ಸಮಾಜದಲ್ಲಿ ಧಾರ್ಮಿಕ ದ್ವೇಷ ಹರಡಲು ಯತ್ನ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಗುರುವಾರ ಹೈಕೋರ್ಟ್ ತಡೆಯಾಜ್ಞೆ ನೀಡಿತು.
ಪ್ರಕರಣ ಸಂಬಂಧ ಅಧೀನ ನ್ಯಾಯಾಲಯಗಳ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಈ ಎರಡೂ ಅರ್ಜಿಗಳಲ್ಲಿ ಪ್ರತಿವಾದಿಗಳಾಗಿರುವ ಚಿಕ್ಕಮಗಳೂರು ಟೌನ್ ಮತ್ತು ಬಸವನಹಳ್ಳಿ ಠಾಣಾ ಪೊಲೀಸರು, ಚುನಾವಣಾ ಅಧಿಕಾರಿಗಳಾಗಿದ್ದ ಜಯಲಕ್ಷ್ಮಮ್ಮ ಮತ್ತು ದೀಪಕ್ ಅರವಿಂದ ಗರಗ್ ಅವರಿಗೆ ನೋಟಿಸ್ ನೀಡಿತು. ಬಳಿಕ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಿ.ಟಿ.ರವಿ ಅವರು ತಮ್ಮ ಅಧಿಕೃತ ಟ್ವಿಟರ್ (ಈಗಿನ ಎಕ್ಸ್) ಖಾತೆಯಲ್ಲಿ 'ಕರ್ಮಯೋಗಿ ಮಾತ್ರ ಭಾರತದ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅವರನ್ನು ರಕ್ಷಿಸುತ್ತಾರೆ' ಎಂದು ಬರೆದು ಪೋಸ್ಟ್ ಮಾಡಿದ್ದರು. ಆ ಮೂಲಕ ಧಾರ್ಮಿಕ ದ್ವೇಷ ಹರಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾರೆ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಸಂಚಾರ ವೀಕ್ಷಣಾ ತಂಡದ ಮುಖ್ಯಸ್ಥ ದೀಪಕ್ ಅರವಿಂದ ಗರಗ್ ಅವರು ಬಸವನಹಳ್ಳಿ ಠಾಣೆಗೆ 2024ರ ಮೇ 9ರಂದು ದೂರು ನೀಡಿದ್ದರು. ಈ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ 2ನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಅದೇ ರೀತಿ ಚುನಾವಣಾಧಿಕಾರಿಯಾಗಿದ್ದ ಜಯಲಕ್ಷಮ್ಮ ಅವರು 2024ರ ಮಾ.20ರಂದು ಚಿಕ್ಕಮಗಳೂರು ಟೌನ್ ಠಾಣಾ ಪೊಲೀಸರಿಗೆ ದೂರು ನೀಡಿ, ಸಿ.ಟಿ.ರವಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಸಾಗರಗಳ ಆಳವನ್ನು ಅಳೆಯಬಹುದು. ಆದರೆ, ಹಿಂದೂ ಮತ್ತು ಹಿಂದೂ ಧರ್ಮದ ವಿರುದ್ಧ ರಾಹುಲ್ ಗಾಂಧಿಯವರ ದ್ವೇಷವನ್ನು ಎಂದಿಗೂ ಕಂಡುಹಿಡಿಯಲಾಗದು. ಹಿಂದೂ ಧರ್ಮದಲ್ಲಿ ಶಕ್ತಿ ಎಂಬ ಪದವಿದೆ. ನಮ್ಮ ಹೋರಾಟ ಶಕ್ತಿ ವಿರುದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದುಷ್ಟ ಶಕ್ತಿಗಳ ದಾಳಿಯಿಂದ ನಮ್ಮ ಧರ್ಮವನ್ನು ರಕ್ಷಿಸಲು, ಹಿಂದೂಗಳು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಿರ್ದಯವಾಗಿ ತೆಗೆದುಹಾಕಬೇಕು' ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣ ಚಿಕ್ಕಮಗಳೂರು ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಎರಡು ಪ್ರಕರಣಗಳ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಸಿ.ಟಿ.ರವಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಸಿಎಂ ರಾಜೀನಾಮೆಗೆ ಆಗ್ರಹ: ವಿಧಾನಸೌಧಕ್ಕೆ ಬೀಗ ಜಡಿಯಲು ಯತ್ನ, ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ - BJP Protest