ಬೆಂಗಳೂರು: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದವಾರ ಗೋವಿಂದಪ್ಪ ಎಂಬವರ ಮನೆಯಲ್ಲಿ 4.8 ಕೋಟಿ ರೂ. ಹಣ ಜಪ್ತಿಯಾಗಿರುವ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧದ ಪ್ರಕರಣದ ವಿಚಾರಣೆಗೆ ಇಂದು ಹೈಕೋರ್ಟ್ ತಡೆ ನೀಡಿತು.
ಚುನಾವಣಾ ಆಯೋಗದ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಜೆಎಂಎಫ್‌ಸಿ ಕೋರ್ಟ್ ವಿಚಾರಣೆಗೆ ತಡೆ ಕೋರಿ ಡಾ.ಕೆ.ಸುಧಾಕರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ, ''ಗೋವಿಂದಪ್ಪ ಅವರ ಮನೆಯಲ್ಲಿ ಚುನಾವಣಾಧಿಕಾರಿಗಳು 4.8 ಕೋಟಿ ರೂ. ಜಪ್ತಿ ಮಾಡಿದ್ದರು. ಆ ಹಣಕ್ಕೂ ಡಾ. ಸುಧಾಕರ್ ಅವರಿಗೆ ಯಾವುದೇ ಸಂಬಂಧವಿಲ್ಲ. ಗೋವಿಂದ ಹಿಂದೆ ಡಾ. ಸುಧಾಕರ್ ಪ್ರತಿನಿಧಿಸುವ ರಾಜಕೀಯ ಪಕ್ಷದ ಪದಾಧಿಕಾರಿ ಆಗಿದ್ದರು, ಹಣ ಜಪ್ತಿ ಮಾಡಿದ ಪ್ರದೇಶ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಮತ್ತು ಆ ಕ್ಷೇತ್ರದಿಂದ ಡಾ. ಸುಧಾಕರ್ ಸ್ಪರ್ಧಿಸಿದ್ದು, ಜಪ್ತಿ ಮಾಡಿದ ಹಣ ಮತದಾರರಿಗೆ ಹಂಚಲು ಬಳಸಿಕೊಳ್ಳಲು ಸಂಗ್ರಹಿಸಿ ಇಡಲಾಗಿತ್ತು ಎಂಬ ಅನುಮಾನ ಮತ್ತು ಊಹೆಯ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಐಪಿಸಿ 171-ಬಿ ಅಡಿ ಪ್ರಕರಣ ದಾಖಲಿಸಲಾಗಿದೆ''.
''ಆದರೆ, ಐಪಿಸಿ-171-ಬಿ ಮತದಾರರಿಗೆ ಆಮಿಷ ಅಥವಾ ಲಂಚ ನೀಡುವ ಬಗ್ಗೆೆ ವ್ಯಾಾಖ್ಯಾನಿಸುತ್ತದೆ. ಅದರಂತೆ ಓಟಿಗಾಗಿ ಲಂಚ ಅಥವಾ ಹಣ ಹಂಚುವವರು ಮತ್ತು ಹಣ ತೆಗೆದುಕೊಳ್ಳುವವರು ಇಬ್ಬರು ಇರಬೇಕು. ಈ ಪ್ರಕರಣದಲ್ಲಿ ಅಂತಹದ್ದು ನಡೆದಿಲ್ಲ. ಮತದಾರರಿಗೆ ಹಂಚಲು ಹಣ ಇಡಲಾಗಿತ್ತು ಎಂಬುದು ಋಜುವಾತು ಆಗಿಲ್ಲ, ಹಣ ತೆಗೆದುಕೊಳ್ಳುವವರೂ ಇಲ್ಲ. ಇದೊಂದು 'ಮೇಲ್ನೋಟ'ದ ಪ್ರಕರಣವಾಗಿದೆಯಷ್ಟೇ'' ಎಂದು ವಾದಿಸಿದರು.
''ಮುಖ್ಯವಾಗಿ ಈ ಪ್ರಕರಣದಲ್ಲಿ ಮ್ಯಾಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಆದೇಶಿಸಿದೆ. ಆದರೆ, ಈ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಆದೇಶಿಸಿರುವುದು ಕಾನೂನುಬಾಹಿರ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು'' ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ''ಪ್ರಕರಣ ರದ್ದುಪಡಿಸಬಾರದು, ಚುನಾವಣಾ ನೋಡಲ್ ಅಧಿಕಾರಿಗೆ ಅರ್ಜಿದಾರರು ವಾಟ್ಸ್‌ಆ್ಯಪ್ ಸಂದೇಶ ಕಳಿಸಿದ್ದು, ಫೋನ್ ಮಾಡಿರುವ ಸಾಕ್ಷಿ ಇದೆ. 10 ಕೋಟಿ ರೂ. ಸಂಗ್ರಹಿಸಿಟ್ಟಿದ್ದ ಬಗ್ಗೆ ನೋಡಲ್ ಅಧಿಕಾರಿಗೆ ಮಾಹಿತಿ ಬಂದಿತ್ತು. ಅದನ್ನು ಅವರು ಸಂಬಂಧಪಟ್ಟ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿಗೆ ರವಾನಿಸಿದ್ದರು. ಅದರಂತೆ ದಾಳಿ ನಡೆಸಿದಾಗ 4.8 ಕೋಟಿ ರೂ. ಸಿಕ್ಕಿದೆ. ಆದ್ದರಿಂದ ಅರ್ಜಿದಾರ ಆರೋಪಿಗಳ ವಿಚಾರಣೆಗೆ ಅವಕಾಶ ನೀಡಬೇಕು'' ಎಂದು ಕೋರಿದರು.
ಅರ್ಜಿದಾರರ ಮತ್ತು ಸರ್ಕಾರದ ವಕೀಲರ ವಾದ ಆಲಿಸಿದ ನ್ಯಾಯಪೀಠ, ಸಂಸದ ಡಾ.ಕೆ. ಸುಧಾಕರ್ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಮನೆಯಿಂದ 4.8 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದರು. ಇದು ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಿಗೆ ಹಂಚುವ ಹಣ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯ ರಾಜ್ಯ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರಿಗೆ ಸುಧಾಕರ್ ಅವರು ವಾಟ್ಸ್‌ಆ್ಯಪ್ ಮೆಸೇಜ್ ಮಾಡಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ನೆಲಮಂಗಲ ಜೆಎಂಎಫ್‌ಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಡಾ.ಕೆ.ಸುಧಾಕರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.