ಬೆಂಗಳೂರು: ನಗರದ ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ನಾಮನಿರ್ದೇಶನಗೊಂಡಿರುವ 9 ಮಂದಿ ಸಿಂಡಿಕೇಟ್ ಸದಸ್ಯರು ಆ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಹಾಗೂ ಸಿಂಡಿಕೇಟ್ ಸಭೆಯಲ್ಲಿ ಭಾಗವಹಿಸದಂತೆ ಹೈಕೋರ್ಟ್ ಮತ್ತೊಮ್ಮೆ ಮೌಖಿಕ ಸೂಚನೆ ನೀಡಿದೆ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಿಗೆ 9 ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆಗಸ್ಟ್ 27ರಂದು ಆದೇಶ ಹೊರಡಿಸಿತ್ತು.
ಈ ಆದೇಶ ಪ್ರಶ್ನಿಸಿ ಶಿಕ್ಷಣ ತಜ್ಞರಾದ ಡಾ.ಪಿ.ಬಿ.ಜಯಕೃಷ್ಣ, ಕೆ.ರಾಮಮೂರ್ತಿ, ಆರ್‌ಎಸ್‌ಎನ್ ಪ್ರಸಾದ್ ಮತ್ತು ಡಾ.ಎಂ.ಚಿಕ್ಕಮುನಿಯಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ, ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಹಿಂದಿನ ವಿಚಾರಣೆ ವೇಳೆ ಸೂಚಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಬೆಂಗಳೂರು ಉತ್ತರ ವಿವಿಯ ಘಟಿಕೋತ್ಸವದಲ್ಲಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರು ಭಾಗವಹಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ನ್ಯಾಯಾಲಯದ ಸೂಚನೆಯಿದ್ದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲವೆಂದು ಪೀಠ ನುಡಿಯಿತು.
ಬಳಿಕ ನ್ಯಾಯಪೀಠ, ಸಿಂಡಿಕೇಟ್ ಸದಸ್ಯರಿಗೆ ಆ ಸ್ಥಾನದಲ್ಲಿ ಕಾರ್ಯ ನಿರ್ವಹಿಸದಂತೆ ಸೂಚನೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರಲ್ಲದೇ, ಪ್ರತಿವಾದಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದು, ಅವರ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕೋರಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಸರ್ಕಾರ ಹಾಗೂ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರು ಸೇರಿದಂತೆ ಅರ್ಜಿಯಲ್ಲಿನ ಎಲ್ಲ ಪ್ರತಿವಾದಿಗಳು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮಂದೂಡಿತು.
ಪ್ರಕರಣದ ಹಿನ್ನೆಲೆ: ಡಾ.ಜಯಶ್ರೀ ಹೆಗ್ಡೆ, ಎಂ.ಎ.ಮಹದೇವ ನಾಯ್ಕ, ರಮೇಶ್ ಬಾಬು, ಆಯೇಷಾ ಫರ್ಜಾನಾ, ವಿ.ಶಿವಕುಮಾರ್, ಎಸ್.ಆರ್. ಸಹನಾ, ಜೈದೀಪ್, ಅರ್ಬಾಜ್ ಪಾಷಾ ಮತ್ತು ಎಂ.ಗೋಪಾಲ ಗೌಡ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ (ವಿಶ್ವವಿದ್ಯಾಲಯಗಳು-2) ಇಲಾಖೆಯ ಅಧೀನ ಕಾರ್ಯದರ್ಶಿ 2024ರ ಆ.27ರಂದು ಅಧಿಸೂಚನೆ ಹೊರಡಿಸಿದ್ದರು.
ಈ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿದಾರರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲಿ ಹೇಳಿರುವಂತೆ ನಾಮ ನಿರ್ದೇಶನಗೊಂಡಿರುವವರು ಶಿಕ್ಷಣ ತಜ್ಞರಲ್ಲ. ಅವರು ಸಿಂಡಿಕೇಟ್ ಸದಸ್ಯರಾಗಲು ನಿಗದಿತ ಅರ್ಹತೆ ಹೊಂದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣತಿ ಹೊಂದಿಲ್ಲ. ಇದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ಸೆಕ್ಷನ್ 28(1)(ಜಿ) ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧದ ಪ್ರಕರಣ ರದ್ದು - Siddhasiri Sugar Factory