ಬೆಂಗಳೂರು: ರಸ್ತೆ ಒತ್ತುವರಿ ಮಾಡಿದ ಆರೋಪದಲ್ಲಿ ನೋಟಿಸ್ ನೀಡದೇ ಅಂಗಡಿ ಮಳಿಗೆ ತೆರವುಗೊಳಿಸುವುದು ಕಾನೂನುಬಾಹಿರವಾಗಿದೆ. ಈ ರೀತಿಯ ಘಟನೆಯಿಂದ ತೊಂದರೆಗೊಳಗಾಗುವ ಅಂಗಡಿ ಮಾಲೀಕರಿಗೆ ತಪ್ಪಿತಸ್ಥ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಮಾಗಡಿ ಪಟ್ಟಣದಲ್ಲಿದ್ದ ಒತ್ತುವರಿ ಆರೋಪದಲ್ಲಿ ಜವಳಿ ಅಂಗಡಿ ಮಾಲೀಕನಿಗೆ ನೋಟಿಸ್ ನೀಡದೇ, ಲೋಕೋಪಯೋಗಿ ಇಲಾಖೆಯಿಂದ ತೆರವುಗೊಳಿಸಿದ ಕ್ರಮ ಪ್ರಶ್ನಿಸಿ ಟಿ.ಎನ್.ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸರ್ಕಾರ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸದೇ ಕರ್ನಾಟಕ ಹೆದ್ದಾರಿ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಘಟನೆಯ ಸಂಬಂಧ ರಾಮನಗರ ಜಿಲ್ಲಾಧಿಕಾರಿಗಳು ಅರ್ಜಿದಾರರಾದ ಅಂಗಡಿ ಮಾಲೀಕರಿಗೆ ಆಗಿರುವ ನಷ್ಟವನ್ನು ಲೆಕ್ಕ ಮಾಡಿಕೊಳ್ಳಬೇಕು. ಮುಂದಿನ ಮೂರು ತಿಂಗಳುಗಳಲ್ಲಿ ಮಾಲೀಕರಿಗೆ ಆದ ನಷ್ಟವನ್ನು ಪಾವತಿಸಬೇಕು ಎಂದು ಸೂಚನೆ ನೀಡಿದೆ.
ಜೊತೆಗೆ, ತಪ್ಪಿತಸ್ಥ ಅಧಿಕಾರಿಗಳಿಗೆ ನಷ್ಟ ಪಾವತಿ ಜವಾಬ್ದಾರಿಯನ್ನು ನಿಗದಿಪಡಿಸಿ ಅಂಗಡಿ ಮಾಲೀಕನಿಗೆ ಪಾವತಿಸಿದ ಮೊತ್ತವನ್ನು ತ್ಪಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಅದರ ಸಂಬಂಧದ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ ಹೆದ್ದಾರಿ ಕಾಯಿದೆ ಸೆಕ್ಷನ್ 23ರ ಪ್ರಕಾರ ಹೆದ್ದಾರಿ ಅಧಿಕಾರಿಗಳು ಒತ್ತುವರಿ ಮಾಡಿದ ಕಟ್ಟಡಗಳು/ಭೂಮಿಗೆ ಸಂಬಂಧಿಸಿದಂತೆ ತೆರವಿಗೂ ಮುನ್ನ ಸೂಚನೆ ನೀಡಬೇಕು. ಒತ್ತುವರಿ ತೆರವು ಮಾಡಲು ಕಾಲಮಿತಿ ನಿಗದಿಪಡಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಯಾವುದೇ ನೋಟಿಸ್ ಜಾರಿ ಮಾಡದಿರುವುದು ಹೆದ್ದಾರಿ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.
ಅಲ್ಲದೆ, ಅಂಗಡಿ ಒತ್ತುವರಿ ಆಗಿರುವುದರಿಂದ ನೋಟಿಸ್ ಜಾರಿ ಮಾಡಬೇಕಾದ ಅಗತ್ಯವಿಲ್ಲ. ಜೊತೆಗೆ, ಆಸ್ತಿಯ ಮಾಲೀಕರಿಂದ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆಕ್ಷೇಪಣೆ ವ್ಯಕ್ತವಾಗಿಲ್ಲ. ಅಂತಹ ಸಂದರ್ಭದಲ್ಲಿ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲೇಬೇಕು ಎಂಬ ನಿಯಮ ಅನ್ವಯಿಸುವುದಿಲ್ಲ ಎನ್ನುವ ಸರ್ಕಾರದ ವಾದವನ್ನು ಪೀಠ ತಳ್ಳಿಹಾಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿಯನ್ನು 2011ರ ನವೆಂಬರ್ 21ರಂದು ಕೆಡವಲಾಗಿದೆ. ಇದನ್ನು ಪ್ರಶ್ನಿಸಿ ನವೆಂಬರ್ 24ರಂದು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನವೆಂಬರ್ 25ರಂದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣ 13 ವರ್ಷಗಳಿಂದ ಹೈಕೋರ್ಟ್‌ನಲ್ಲಿದೆ. ಇದೀಗ ಪ್ರಕರಣವನ್ನು ಸಿವಿಲ್ ನ್ಯಾಯಾಲಯಕ್ಕೆ ರವಾನಿಸಬೇಕು ಎಂದು ಸರ್ಕಾರ ವಾದ ಮಂಡಿಸಿದೆ. ಈ ಅಂಶವನ್ನು ಒಪ್ಪಲಾಗುವುದಿಲ್ಲ. ಪ್ರಕರಣ ಸಿವಿಲ್ ನ್ಯಾಯಾಲಯಕ್ಕೆ ರವಾನಿಸಿದಲ್ಲಿ ಅರ್ಜಿದಾರರ ಹಕ್ಕುಗಳು ಮತ್ತು ನ್ಯಾಯದಿಂದ ವಂಚಿತಗೊಳಿಸುವುದಲ್ಲದೇ, ನ್ಯಾಯ ನಿರಾಕರಿಸಿದಂತಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಕಟ್ಟಡವನ್ನು ಮಾಲೀಕ ಕೆ.ಎಸ್.ನಟರಾಜನ್ ಎಂಬವರಿಂದ ಬಾಡಿಗೆಗೆ ಪಡೆದಿದ್ದ ಅರ್ಜಿದಾರ ಟಿ.ಎನ್.ಚಂದ್ರಶೇಖರ್ ಅವರು ಜವಳಿ ಅಂಗಡಿಯನ್ನು ಆರಂಭಿಸಿದ್ದರು. ಈ ನಡುವೆ ಆ ಕಟ್ಟಡವನ್ನು ಪಕ್ಕದ ಅಂಗಡಿ ಮಾಲೀಕ ರಾಧಾಬಾಲಕೃಷ್ಣ ಎಂಬುವರು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಿಂದ ಅಂಗಡಿ ಖಾಲಿ ಮಾಡುವಂತೆ ನಟರಾಜನ್ ಅವರು ಚಂದ್ರಶೇಖರ್ ಅವರಿಗೆ ಸೂಚಿಸಿದ್ದರು. ಇದಕ್ಕೆ ಒಪ್ಪದಿದ್ದಾಗ ಅಧಿಕಾರಿಗಳೊಂದಿಗೆ ಶಾಮೀಲಾಗಿ ರಸ್ತೆ ಒತ್ತುವರಿಯಾಗಿದೆ ಎಂಬುದಾಗಿ ತಿಳಿಸಿ ಅಂಗಡಿಯನ್ನು ಕೆಡವಿದ್ದರು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರ ಚಂದ್ರಶೇಖರ್ ಕಟ್ಟಡ ಕೆಡವುದರಿಂದ ಆಗಿರುವ 50 ಲಕ್ಷ ರೂ.ಗಳ ನಷ್ಟ ಸೇರಿದ 72 ಲಕ್ಷ ರೂ. ಪಾವತಿ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಅಪರಾಧವಲ್ಲ: ಹೈಕೋರ್ಟ್ - High Court