ಬೆಂಗಳೂರು: ಮಗುವಿಗೆ ವಾರದಲ್ಲಿ ಒಂದು ದಿನ ಮಾತ್ರ ತಾಯಿಯ ಭೇಟಿಗೆ ಅವಕಾಶ ನೀಡಿದರೆ ಸಾಲದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಗಂಡು ಮಗು ತಂದೆಯ ಪಾಲನೆಯಲ್ಲಿದ್ದರೂ ಸಹ ತಾಯಿಯ ಆರೈಕೆ ಮುಖ್ಯವಾಗಿರಲಿದೆ ಎಂದು ತಿಳಿಸಿದೆ.
ಮಗುವಿನ ಸುಪರ್ದಿಯನ್ನು ತಾಯಿಗೆ ಹಸ್ತಾಂತರಿಸುವಂತೆ ಮದ್ದೂರು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸುವಂತೆ ಕೋರಿ ತಂದೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಹಾಗೂ ನ್ಯಾಯಮೂರ್ತಿ ಶಿವಶಂಕರೇಗೌಡ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಕನಿಷ್ಠ ಎರಡು ದಿನವಾದರೂ ನೀಡಬೇಕು ಎಂದು ಖುದ್ದು ಆಸಕ್ತಿ ವಹಿಸಿ, ತಾಯಿ - ಮಗುವಿನ ಭೇಟಿಗೆ ಎರಡು ದಿನಗಳ ಅವಕಾಶ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಗಂಡು ಮಗುವು ತಂದೆಯ ಪಾಲನೆಯಲ್ಲಿದ್ದರೂ ಸಹ ತಾಯಿಯ ಆರೈಕೆಯೂ ಬಹಳ ಮುಖ್ಯ. ತಾಯಿಯ ಭೇಟಿಗೆ ಕೇವಲ ವಾರದಲ್ಲಿ ಒಂದು ದಿನ ಅವಕಾಶ ನೀಡಿದರೆ ಸಾಲದು, ಕನಿಷ್ಠ ಎರಡು ದಿನವಾದರೂ ನೀಡಬೇಕು ಎಂದು ತಿಳಿಸಿ ತಾಯಿ - ಮಗುವಿನ ಭೇಟಿಗೆ ಎರಡು ದಿನಗಳ ಅವಕಾಶ ನೀಡಿದೆ. ಅಲ್ಲದೆ, ಮಗುವಿನ ಸುಪರ್ದಿಯನ್ನು ತಾಯಿಗೆ ಹಸ್ತಾಂತರಿಸುವಂತೆ ವಿಚಾರಣಾ ನ್ಯಾಯಾಲಯದ ನೀಡಿದ ತೀರ್ಪಿಗೆ ತಡೆಯಾಜ್ಞೆ ವಿಧಿಸಿ, ಪ್ರತಿವಾದಿಗೆ ಈ ಸಂಬಂಧ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಪತಿ ಮತ್ತು ಪತ್ನಿ 2002ರ ಮೇ 20 ರಂದು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರರಿದ್ದಾರೆ. ವೈವಾಹಿಕ ಜೀವನದಲ್ಲಿ ವೈಮನಸ್ಸು ಉಂಟಾಗಿ 2015 ರಿಂದ ಪ್ರತ್ಯೇಕ ವಾಸಿಸುತ್ತಿದ್ದಾರೆ. ಬಳಿಕ ಪತಿ ಎರಡು ಗಂಡು ಮಕ್ಕಳ ಲಾಲನೆ, ಪಾಲನೆಯಲ್ಲಿ ತೊಡಗಿದ್ದಾರೆ. ಬಳಿಕ 2017 ರಲ್ಲಿ ಪತಿಯೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು. 2018ರಲ್ಲಿ ಪತ್ನಿಯೂ ಹಿರಿಯ ಮತ್ತು ಕಿರಿಯ ಮಗನ ಪಾಲನೆ ತಮಗೆ ನೀಡಬೇಕು ಎಂದು ಮದ್ದೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ವಿಚಾರಣೆ ಪೂರ್ಣಗೊಳ್ಳುವ ವೇಳೆ ಹಿರಿಯ ಮಗ 18 ವಯಸ್ಸು ತಲುಪಿದ್ದರು. ಕಿರಿಯ ಮಗನಿಗೆ ನ್ಯಾಯಾಲಯವು ಯಾರ ಜೊತೆ ಇರಲು ಬಯಸುತ್ತೀಯಾ ಎಂದು ಕೇಳಿದಾಗ, ಆತ ತಂದೆ ಜೊತೆ ಎಂದಿದ್ದಾನೆ. ಮತ್ತು ತಾಯಿಯ ಜೊತೆಗೆ ಹೋಗಲು ನಿರಾಕರಿಸಿದ್ದಾನೆ. ಆದರೂ ಆತನದ್ದು ಹದಿಹರೆಯದ ವಯಸ್ಸು ಎಂದು ಹೇಳಿ ಮಗುವನ್ನು ತಾಯಿಯ ಸುರ್ಪದಿಗೆ ನೀಡಿದೆ. ಈ ಆದೇಶ ರದ್ದು ಕೋರಿ ತಂದೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಪತ್ನಿಯೂ ಹೇಳದೆ, ಕೇಳದೆ ಪತಿಯನ್ನು ತೊರೆದು ಮನೆಬಿಟ್ಟು ಹೋದ ದಿನದಿಂದಲೂ ಅರ್ಜಿದಾರರು ಮಕ್ಕಳನ್ನು ಸಾಕುತ್ತಿದ್ದಾರೆ. ಶಿಕ್ಷಣ, ವಸತಿ ಸೇರಿ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದ್ದಾರೆ. ಇದನ್ನು ಗಮನಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ'' ಎಂದು ಆಕ್ಷೇಪಿದರು.
''ಅಲ್ಲದೆ, ಕಲಾಪದ ವೇಳೆ ಪೀಠದ ಸಮ್ಮಖದಲ್ಲಿ ಕಿರಿಯ ಮಗ ತನ್ನ ತಾಯಿಯೊಂದಿಗೆ ಹೋಗಲು ನಿರಾಕರಿಸಿದ್ದು, ತಂದೆಯ ಪಾಲನೆಯಲ್ಲೇ ಇರಲು ಅಭಿಲಾಷೆ ವ್ಯಕ್ತಪಡಿಸಿದ್ದಾನೆ. ಆದರೆ, ಆತ ಹದಿಹರೆಯದವ ಎನ್ನುವ ಕಾರಣಕ್ಕೆ ಅವನ ಹೇಳಿಕೆಯನ್ನು ಪರಿಗಣಿಸದೆ, ವಿಚಾರಣಾ ನ್ಯಾಯಾಲಯವು ಆತನನ್ನು ತಾಯಿಯ ಸುಪರ್ದಿಗೆ ನೀಡುವಂತೆ ಆದೇಶ ಹೊರಡಿಸಿದೆ. ಇದು ಕಾನೂನಿಗೆ ವಿರುದ್ಧವಾದ ನಡೆ. ಹಾಗಾಗಿ, ಈ ಆದೇಶವನ್ನು ರದ್ದುಗೊಳಿಸಬೇಕು. ಮಗುವನ್ನು ತಂದೆ ಸುಪರ್ದಿಗೆ ನೀಡಬೇಕು'' ಎಂದು ಪೀಠದ ಮುಂದೆ ಮನವಿ ಮಾಡಿದರು. ಅಲ್ಲದೆ, ತಾಯಿಯು ಮಗುವನ್ನು ಭೇಟಿ ಮಾಡಲು ವಾರದಲ್ಲಿ ಒಂದು ದಿನ ಅವಕಾಶ ನೀಡುವುದಾಗಿ ಹೇಳಿದರು.
ಇದನ್ನೂ ಓದಿ: ಇಬ್ಬರು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ಕಾರ್ಮಿಕ ಇಲಾಖೆಗೆ ಹೈಕೋರ್ಟ್ ಆದೇಶ - High Court