ಬೆಂಗಳೂರು : ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಿಗೆ ಆಸ್ಪತ್ರೆಯ ಒಂದು ವಿಭಾಗದ ಮುಖ್ಯಸ್ಥರು ಎಚ್ಒಡಿ ಯಾಗಿ ಹೆಚ್ಚುವರಿ ಹೊಣೆ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ತಿಳಿಸಿದೆ. ಡಾ. ಎಸ್. ಶ್ರೀಧರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಅಲ್ಲದೇ, ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಟಿ.ಡಿ. ತಿಮ್ಮಪ್ಪ ಅವರನ್ನು ಎಚ್ಒಡಿಯನ್ನಾಗಿ ನೇಮಕ ಮಾಡಿರುವುದನ್ನು ಅಕ್ರಮ ಹಾಗೂ ಕಾನೂನು ಬಾಹಿರ ಎಂದು ರದ್ದುಗೊಳಿಸಿದೆ. ಮೂರನೇ ಪ್ರತಿವಾದಿಯಾಗಿರುವ ಟಿ.ಡಿ.ತಿಮ್ಮಪ್ಪ ರಾಷ್ಟ್ರೀಯ ವೈದ್ಯಕೀಯ ನಿಯಮಗಳಿಗೆ ವಿರುದ್ಧವಾಗಿ ಇಎನ್ಟಿ ವಿಭಾಗದ ಎಚ್‌ಒಡಿ ಆಗಿ ಹೆಚ್ಚುವರಿ ಹೊಣೆಗಾರಿಕೆಗಳನ್ನು ನಿರ್ವಹಿಸುವಂತಿಲ್ಲ ಎಂದು ಆದೇಶ ನೀಡಿದೆ. ವೈದ್ಯಕೀಯ ಕಾಲೇಜು ಎನ್ಎಂಸಿ ನಿಯಮದಂತೆ ಆಡಳಿತಾತ್ಮಕ ಮತ್ತು ಕ್ಲಿನಿಕಲ್ ಪಾತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ವೈದ್ಯಕೀಯ ಅಧೀಕ್ಷಕರಾಗಿ ಆಸ್ಪತ್ರೆಯ ಆಡಳಿತಾತ್ಮಕ ಕೆಲಸದ ಜತೆಗೆ ಬಜೆಟ್, ಸಿಬ್ಬಂದಿ, ಸೌಕರ್ಯಗಳು ಸೇರಿ ಒಟ್ಟಾರೆ ಆಸ್ಪತ್ರೆಯ ಕೆಲಸ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ. ಅಂತಹವರಿಗೆ ಇಎನ್ಟಿ ವಿಭಾಗದ ಹೆಚ್ಚುವರಿ ಹೊಣೆ ವಹಿಸಿದರೆ ಆಗ ಸರ್ಜರಿ, ವೈದ್ಯಕೀಯ ಚಿಕಿತ್ಸೆ ಸೇರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಎರಡೂ ಹುದ್ದೆಗಳನ್ನು ಒಬ್ಬರೇ ಸಮರ್ಪಕವಾಗಿ ನಿರ್ವಹಿಸಲಾಗದು. ಹಾಗಾಗಿ ಆದೇಶವನ್ನು ರದ್ದುಗೊಳಿಸುತ್ತಿರುವುದಾಗಿ ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ವೈದ್ಯಕೀಯ ಅಧೀಕ್ಷಕರ ಹುದ್ದೆ ಆಡಳಿತಾತ್ಮಕ ಹೊಣೆಗಾರಿಕೆಯಾಗಿದ್ದು, ಒಟ್ಟಾರೆ ಆಸ್ಪತ್ರೆಯ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಬೇಕಾಗುತ್ತದೆ. ಒಬ್ಬರೇ ಎರಡು ಹುದ್ದೆಗಳನ್ನು ನಿರ್ವಹಿಸುವುದು ರಾಷ್ಟ್ರಿಯ ವೈದ್ಯಕೀಯ ಆಯೋಗದ ನಿಯಮಗಳಿಗೆ ವಿರುದ್ಧವಾದದು ಮತ್ತು ಎರಡೂ ವಿಭಾಗದಲ್ಲೂ ಪರಿಣಾಮಕಾರಿ ಹಾಗೂ ನಿಸ್ಪಕ್ಷಪಾತ ನಿರ್ಧಾರಗಳನ್ನು ಕೈಗೊಳ್ಳಲಾಗದು ಎಂದು ಹೇಳಿದ್ದರು.
ಪ್ರಕರಣದ ಹಿನ್ನೆಲೆ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ವೈದ್ಯಕೀಯ ಅಧೀಕ್ಷಕ ತಿಮ್ಮಪ್ಪ ಅವರಿಗೆ ಇಎನ್ಟಿ ವಿಭಾಗದ ಎಚ್‌ಒಡಿ ಆಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊರಿಸಿ 2024ರ ಜ.31ರಂದು ಆದೇಶ ಹೊರಡಿಸಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿ, ಈಗಾಗಲೇ ಕಾಲೇಜಿನ ಸೂಪರಿಂಟೆಂಡೆಟ್ ಆಗಿರುವ ಡಾ.ತಿಮ್ಮಪ್ಪ ಅವರಿಗೆ ಎನ್ ಎಂಸಿ ನಿಯಮ 3.7ಕ್ಕೆ ವಿರುದ್ಧವಾಗಿ ಇಎನ್ಟಿ ವಿಭಾಗದ ಎಚ್ಒಡಿ ಹೊಣೆ ನೀಡಿರುವುದು ಕಾನೂನು ಬಾಹಿರ ಕ್ರಮ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಜವಾಬ್ದಾರಿಯುತ ಹುದ್ದೆಗಳಲ್ಲಿ ಒಬ್ಬರನ್ನೇ ನೇಮಿಸಿರುವುದರಿಂದ ಸಂಘರ್ಷ ಹಿತಾಸಕ್ತಿ ಆಗುವುದಲ್ಲದೇ, ರೋಗಿಗಳ ಆರೈಕೆ ಸರಿಯಾಗುವುದಿಲ್ಲ ಮತ್ತು ಹೊಸಬರಿಗೆ ಅವಕಾಶಗಳು ಸಿಗುವುದಿಲ್ಲ ಎಂದು ಆಕ್ಷೇಪಿಸಿದ್ದರು.
ಇದನ್ನೂ ಓದಿ : ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ - High Court