ಬೆಂಗಳೂರು: ಕಳೆದ ವರ್ಷ ವರ್ತೂರು ಸಮೀಪದ ಅಪಾರ್ಟ್‌ಮೆಂಟ್‌ನ ಈಜುಕೊಳದಲ್ಲಿ ಮಗು ಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವಿರುದ್ದ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ಇಂದು ನಿರಾಕರಿಸಿದೆ. ಅಲ್ಲದೇ, ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿ (ನಿರ್ಲಕ್ಷ್ಯದಿಂದ ಸಾವು) ಆರೋಪ ಹೊರಿಸಲು ಆದೇಶಿಸಿತು.
ಪ್ರೆಸ್ಟೀಜ್ ಲೇಕ್ ಸೈಡ್ ಹ್ಯಾಬಿಟೇಟ್ ಹೋಮ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ದೇಬಶಿಶ್ ಸಿನ್ಹಾ ಮತ್ತಿತರ ಪದಾಧಿಕಾರಿಗಳ ವಿರುದ್ಧ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಅಪಾರ್ಟ್ಮೆಂಟ್ಗಳಲ್ಲಿ ಸುರಕ್ಷತೆಯ ಹೊಣೆ ಅಸೋಸಿಯೇಷನ್ ಜವಾಬ್ದಾರಿ ಎಂದು ಹೇಳಿದೆ.
ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 304 (ನರಹತ್ಯೆ) ಮತ್ತು 149ರಡಿ (ಘಟನೆ ನಡೆಯುವುದು ಗೊತ್ತಿದ್ದೂ ನಿರ್ಲಕ್ಷ್ಯ) ಹೊರಿಸಿದ್ದ ಆರೋಪಗಳನ್ನು ರದ್ದುಪಡಿಸಿದೆ. ಆದರೆ ನ್ಯಾಯಾಲಯ ಅಪರಾಧ ದಂಡ ಸಂಹಿತೆ ಸೆಕ್ಷನ್ (ಸಿಆರ್‌ಪಿಸಿ) 482 ಅಡಿ ತನಗೆ ಲಭ್ಯವಿರುವ ಅಧಿಕಾರ ಬಳಸಿ, ಅರ್ಜಿದಾರರ ವಿರುದ್ಧ ಐಪಿಸಿ 304 ರಡಿ ನಿರ್ಲಕ್ಷ್ಯದಿಂದ ಸಾವು ಆರೋಪ ಹೊರಿಸಿದ್ದು, ಅರ್ಜಿದಾರರು ಅಪಾರ್ಟ್‌ಮೆಂಟ್ ಸಮುಚ್ಛಯದ ಉಸ್ತುವಾರಿ ನೋಡಿಕೊಳ್ಳುತ್ತಿರುವುದನ್ನು ಒಪ್ಪಿಕೊಂಡಿರುವ ಹಿನ್ನೆಲೆ ಮತ್ತು ಮೇಲ್ನೋಟಕ್ಕೆ ಅವರ ನಿರ್ಲಕ್ಷ್ಯ ಕಂಡು ಬಂದಿದೆ. ಹೀಗಾಗಿ ಅವರ ವಿರುದ್ಧ 304 ಸೆಕ್ಷನ್ ಅಡಿ ಹೊರಿಸಿರುವ ಆರೋಪ ರದ್ದು ಮಾಡಲಾಗದು ಎಂದು ಪೀಠ ತಿಳಿಸಿದೆ.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಈಜುಕೊಳದ ಬಳಿ ಯಾವುದೇ ಗಾರ್ಡ್ ಇಲ್ಲದಿರುವುದರಿಂದಲೇ ಘಟನೆ ನಡೆದಿದೆ. ಈ ನಿರ್ಲಕ್ಷ್ಯಕ್ಕೆ ಅರ್ಜಿದಾರರು ಹೊಣೆ ಹೊರಬೇಕಾಗುತ್ತದೆ. ಅಲ್ಲದೆ, ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು ಅಪಾರ್ಟ್ಮೆಂಟ್ಗಳ ಈಜುಕೊಳಗಳ ಬಗ್ಗೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದೂ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 2023ರ ಡಿ.28ರಂದು ರಾಜೇಶ್ ಕುಮಾರ್ ದಮೆರ್ಲಾ ಅವರ ಸಣ್ಣ ಮಗುವೊಂದು ಅಪಾರ್ಟ್ ಮೆಂಟ್ ಸಂಕೀರ್ಣದ ಆವರಣದಲ್ಲಿನ ಈಜುಕೊಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿತ್ತು. ಮಗುವಿನ ತಂದೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನ ನಿರ್ಲಕ್ಷ್ಯವೇ ಕಾರಣ ಎಂದು ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆ ದೂರು ದಾಖಲಿಸಿದ್ದರು.
ಪೊಲೀಸರು ತನಿಖೆ ನಡೆಸಿ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಐಪಿಸಿ ಸೆಕ್ಷನ್ 304 ಅನ್ವಯ ಮಾಡಿರುವುದು ಸರಿಯಲ್ಲ, ಅರ್ಜಿದಾರರಿಗೆ ಆ ಮಗು ಸಾಯಲಿ ಎಂಬ ಉದ್ದೇಶವಿರಲಿಲ್ಲ. ಬೆಂಗಳೂರು ನಗರದ ಯಾವ ಅಪಾರ್ಟ್‌ಮೆಂಟ್‌ನ ಈಜುಕೊಳಗಳಲ್ಲೂ ಗಾರ್ಡ್ ಇರುವುದಿಲ್ಲ. ಪ್ರಕರಣವನ್ನು ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆ ಆಗಲಿದೆ ಎಂದು ವಾದಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ಅರ್ಜಿದಾರರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ. ಮಗುವಿನ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮಗು ಕೊಳಕ್ಕೆ ಬಿದ್ದು ನೀರು ಕುಡಿದಿರುವುದೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಘಟನೆ ಅಪಾರ್ಟ್ಮೆಂಟ್ನೊಳಗೆ ನಡೆದಿರುವುದರಿಂದ ಅದಕ್ಕೆ ಅಸೋಸಿಯೇಷನ್ ಪದಾಧಿಕಾರಿಗಳೇ ಹೊಣೆಗಾರರು ಎಂದು ಹೇಳಿದ್ದರು.
ಇದನ್ನೂ ಓದಿ: ಸಹಕಾರ ಸಂಘಗಳ ಕಾಯ್ದೆ ಸೆಕ್ಷನ್ 128ರ ತಿದ್ದುಪಡಿ ಸಂವಿಧಾನಬಾಹಿರ: ಹೈಕೋರ್ಟ್ - High Court