ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಒಂದನೇ ಆರೋಪಿ ಎಂ.ಎನ್. ಗೋಪಾಲಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಹೆಸರಘಟ್ಟ ಹೋಬಳಿಯ ಗೋಪಾಲಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ಜಿ. ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ''ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನಿಖಾಧಿಕಾರಿ ಪೆನ್ ಡ್ರೈವ್, ಪತ್ರ ಸೇರಿದಂತೆ ಸಾಕಷ್ಟು ಸಾಕ್ಷ್ಯವನ್ನು ಸಂಗ್ರಹ ಮಾಡಿದ್ದಾರೆ. ಮೇಲ್ನೋಟಕ್ಕೆ ದೂರಿನಲ್ಲಿ ಆರೋಪಿಯ ವಿರುದ್ಧ ದೂರುದಾರರು ಮಾಡಿರುವ ಆರೋಪಗಳಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂಬುದು ಕಂಡು ಬರುತ್ತಿದೆ'' ಎಂದು ಪೀಠ ತಿಳಿಸಿದೆ.
''ತನಿಖಾಧಿಕಾರಿಯ ವಿಸ್ತೃತ ತನಿಖೆಯಿಂದ ಮಾತ್ರ ಅರ್ಜಿದಾರರ ವಿರುದ್ಧ ದೂರುದಾರ ವಿಶ್ವನಾಥ್ ಮಾಡಿರುವ ಆರೋಪಗಳ ಸತ್ಯಾಂಶ ಹೊರಬರಲು ಸಾಧ್ಯ. ಹಾಗಾಗಿ, ಈ ಹಂತದಲ್ಲಿ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ, ಅರ್ಜಿ ವಜಾಗೊಳಿಸಲಾಗುತ್ತಿದೆ'' ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಪರ ವಕೀಲರ ವಾದ: ''ಈ ಹಿಂದೆ ನ್ಯಾಯಾಲಯ ತಾಂತ್ರಿಕ ಕಾರಣಗಳಿಂದಾಗಿ ಪ್ರಕರಣವನ್ನು ರದ್ದುಗೊಳಿಸಿತ್ತು. ಅದೇ ಆಧಾರದಲ್ಲಿ ಶಾಸಕರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಹಾಗಾಗಿ ಪ್ರಕರಣ ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ'' ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದರೆ ಆ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಆರೋಪಿ ಎಂ. ಎನ್. ಗೋಪಾಲಕೃಷ್ಣ ಹಾಗೂ ಮತ್ತೋರ್ವ ವ್ಯಕ್ತಿ ವಿಶ್ವನಾಥ್ ಅವರನ್ನು ಮುಗಿಸುವುದಾಗಿ ಮಾತನಾಡಿದ್ದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಆಧರಿಸಿ ವಿಶ್ವನಾಥ್ 2021ರ ಡಿ.1ರಂದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ವಿವಿಧ ಸೆಕ್ಷನ್ಗಳಡಿ ದೂರು ದಾಖಲಿಸಿದ್ದರು. ಆ ದೂರು ಸಲ್ಲಿಸಿದ ದಿನವೇ ಶಾಸಕರ ಕಚೇರಿಗೆ ಒಂದು ಲಕೋಟೆ ಬಂದಿತ್ತು, ಅದರಲ್ಲಿ ಪೆನ್ ಡ್ರೈವ್ ಹಾಗೂ ಬೆದರಿಕೆ ಪತ್ರವಿತ್ತು. ಪೊಲೀಸರು ತನಿಖೆಗಾಗಿ ಅದನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಮಧ್ಯೆ, ಆ ದೂರನ್ನು ರದ್ದುಗೊಳಿಸುವಂತೆ ಕೋರಿ ಗೋಪಾಲಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ನ್ಯಾಯಾಲಯ 2022ರ ಸೆ.27ರಂದು ಅರ್ಜಿಯನ್ನು ಮಾನ್ಯ ಮಾಡಿ ತಾಂತ್ರಿಕ ಕಾರಣಗಳಿಂದಾಗಿ ದೂರು ಸಲ್ಲಿಸಿರುವ ಪ್ರಕ್ರಿಯೆ ಸರಿಯಾಗಿಲ್ಲ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ. ಆದರೆ ಅರ್ಜಿದಾರರು ಹೊಸದಾಗಿ ದೂರು ಸಲ್ಲಿಸಲು ಸ್ವತಂತ್ರರು ಎಂದು ಆದೇಶ ನೀಡಿತ್ತು.
ಎಸ್.ಆರ್. ವಿಶ್ವನಾಥ್ ಖಾಸಗಿ ದೂರು: ಸಾಕ್ಷ್ಯಗಳನ್ನು ಆಧರಿಸಿ ಗೋಪಾಲಕೃಷ್ಣ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ವಿಶ್ವನಾಥ್ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟು ಆರೋಪಿ ವಿರುದ್ಧ ತನಿಖೆ ನಡೆಸುವಂತೆ ರಾಜಾನುಕುಂಟೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಗೋಪಾಲಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ದರ್ಶನ್ ಆರೋಗ್ಯದ ಕುರಿತ ವೈದ್ಯಕೀಯ ವರದಿ ಹೈಕೋರ್ಟ್ಗೆ ಸಲ್ಲಿಕೆ: ನ.26ಕ್ಕೆ ವಿಚಾರಣೆ ನಿಗದಿ