ಬೆಂಗಳೂರು : ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿಗೆ ಭೂ ಸ್ವಾಧೀನ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಸ್ಥಳೀಯ ನಿವಾಸಿ ಗುರುಪ್ರಸಾದ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ಟಿ.ಜೆ. ಶಿವಶಂಕರ್ ಅವರಿದ್ದ ನ್ಯಾಯಪೀಠ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯೋಜನೆಯ ಪ್ರಕಾರ ಕಾಮಗಾರಿ ನಡೆದರೆ ದೇವಾಲಯದ ಗೋಡೆಯ 3 ಅಡಿ ಪಕ್ಕದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಹೆದ್ದಾರಿಯಲ್ಲಿ ಪ್ರತಿದಿನ ಅಂದಾಜು 15 ಸಾವಿರ ವಾಹನಗಳು ಹಾದುಹೋಗಲಿವೆ. ಇದರಿಂದ ಸಾವಿರಾರು ವರ್ಷಗಳ ಹಳೆಯ ದೇಗುಲಕ್ಕೆ ಅಪಾಯವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಕುರಿತು ಹೆದ್ದಾರಿ ಪ್ರಾಧಿಕಾರ 2023ರ ಅ. 10 ರಂದು ಆದೇಶ ಹೊರಡಿಸಿದೆ. ದೇವಾಲಯದ ಮೂರು ಅಡಿ ದೂರದಲ್ಲಿ ರಸ್ತೆ ಹಾದು ಹೋಗಲಿದೆ. ಇದರಿಂದ ದೇವಾಲಯದ ಗರ್ಭಗುಡಿಗೆ ಕಂಪನ ತಂದೊಡ್ಡುತ್ತದೆ. ಅಷ್ಟೇ ಅಲ್ಲ, ದೇವಸ್ಥಾನದ ಧಾರ್ಮಿಕ ರಥೋತ್ಸವ ನೇರವೇರಿಸಲು ಅಡ್ಡಿ ಉಂಟಾಗುತ್ತದೆ ಮತ್ತು ಇದು ಅನೇಕ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ಇಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೈಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.
ಆದರೆ, ಈ ಸಂಬಂಧ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು.
ಓದಿ: ಆರ್ಥಿಕ ಹಿಂದುಳಿದವರಿಗೆ ಶೇ.10 ಮೀಸಲಾತಿ ಜಾರಿಗೆ ಕೋರಿ ಅರ್ಜಿ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್