ಬೆಂಗಳೂರು: 10 ವರ್ಷದ ಹಿಂದೆ ಬೆಂಗಳೂರು ನಗರದಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಪೊಲೀಸರಿಂದ ಮರು ತನಿಖೆಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಮರು ತನಿಖೆ ಆದೇಶವನ್ನು ಪ್ರಶ್ನಿಸಿ ಆರೋಪಿ ಮುರಳೀಧರ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.
ಬಿಹಾರದ ದೇವೇಂದ್ರ ನಾಥ್ ಸಿಂಗ್ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪೀಠ ಉಲ್ಲೇಖಿಸಿದೆ. ತನಿಖಾಧಿಕಾರಿ ಪ್ರಕರಣದಲ್ಲಿ ಸರಿಯಾಗಿ ತನಿಖೆ ಮಾಡಿಲ್ಲ ಎಂದಾದರೆ ಅಂತಹ ಸಂದರ್ಭದಲ್ಲಿ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸಲು, ಗಾಯಗೊಂಡಿದ್ದ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ಹಾಗೂ ಸಂತ್ರಸ್ತರ ಹೇಳಿಕೆ ಪಡೆಯಲು ಮತ್ತೆ ತನಿಖೆ ನಡೆಸಲು ಅವಕಾಶ ಕೋರಬಹುದು. ಅದರಂತೆ ಪ್ರಸ್ತುತ ಪ್ರಕರಣದಲ್ಲೂ ಸಹ ಮರು ತನಿಖೆಗೆ ಅವಕಾಶ ಕೋರಿದ್ದು, ಅದಕ್ಕೆ ಅನುಮತಿ ನೀಡಬೇಕಾದ ಅಗತ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ತನಿಖಾಧಿಕಾರಿ ಸ್ವತಂತ್ರವಾಗಿ ಮತ್ತೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಿಆರ್‌ಪಿಸಿ ಸೆಕ್ಷನ್ 173 (8)ರಂತೆ ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ರಾಜಾಜಿನಗರದ 6ನೇ ಬ್ಲಾಕ್‌ನ ಷಡಕ್ಷರಮೂರ್ತಿ ಮತ್ತು ಅವರ ಪತ್ನಿ ಮನೆಯಲ್ಲಿದ್ದಾಗ ಆರೋಪಿ ಮುರಳೀಧರ್ ಮತ್ತು ಹರೀಶ್ ಎಂಬುವರು ಮನೆಗೆ ನುಗ್ಗಿದ್ದರು. ಷಡಕ್ಷರಿ ಅವರ ಪತ್ನಿಯ ಮೇಲೆ ತಾವು ರಕ್ಷಣಾ ವೇದಿಕೆ ಕಾರ್ಯಕರ್ತರು ಎಂದು ಹೇಳಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಇದರಿಂದ ಪ್ರಜ್ಞಾಹೀನರಾಗಿದ್ದ ಪತ್ನಿಗೆ ನಂತರ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಪತಿ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಆ ಹಂತದಲ್ಲಿ ಪತ್ನಿ ಪೊಲೀಸರಿಗೆ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಪೊಲೀಸರು ಅವರ ಹೇಳಿಕೆ ಪಡೆಯದೆ, ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.
ಆನಂತರ ವಿಚಾರಣೆ ನಡೆದ ವೇಳೆ ಸಿಆರ್‌ಪಿಸಿ ಸೆಕ್ಷನ್ 173(8) ಅಡಿ ಅರ್ಜಿ ಸಲ್ಲಿಸಿ ಗಾಯಗೊಂಡಿದ್ದ ಪತ್ನಿಯ ಹೇಳಿಕೆಯನ್ನು ಪಡೆದಿಲ್ಲ. ಹೀಗಾಗಿ, ಮತ್ತೆ ತನಿಖೆಗೆ ಅವಕಾಶ ನೀಡಬೇಕು ಎಂದು ಕೋರಿದ್ದರು. ವಿಚಾರಣಾ ನ್ಯಾಯಾಲಯ ಮರುತನಿಖೆಗೆ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ವಿಚಾರಣಾ ನ್ಯಾಯಾಲಯ ಘಟನೆ ನಡೆದು ಎಫ್ಐಆರ್ ದಾಖಲಾಗಿ 9 ವರ್ಷಗಳ ಬಳಿಕ ತಡವಾಗಿ ಸಲ್ಲಿಸಿರುವ ಅರ್ಜಿ ಪರಿಗಣಿಸಿ ಮತ್ತೆ ತನಿಖೆಗೆ ಅವಕಾಶ ನೀಡಿರುವುದು ಸರಿಯಲ್ಲ. ಹಾಗಾಗಿ, ಆ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು'' ಎಂದು ಕೋರಿದ್ದರು.
ಇದನ್ನೂ ಓದಿ: ಪದವೀಧರರು, ಶಿಕ್ಷಕರ ಕ್ಷೇತ್ರದ ಚುನಾವಣೆ: ಮದ್ಯ ಮಾರಾಟ ನಿಷೇಧ ಎತ್ತಿಹಿಡಿದ ಹೈಕೋರ್ಟ್ - ban on sale of liquor