ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬದ ಒಡೆತನವಿರುವ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕದ ಕಾರ್ಯಾಚರಣೆ ಸ್ಥಗಿತಗೊಳಿಸುವ ಕುರಿತು ಮಾಹಿತಿ ಪಡೆದು ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಯತ್ನಾಳ್ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕರಾಗಿರುವ ರಮಣಗೌಡ ಬಿ ಪಾಟೀಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ವಕೀಲರು, ಘಟಕವನ್ನು ರಾಜಕೀಯ ಉದ್ದೇಶದಿಂದ ಸ್ಥಗಿತಗೊಳಿಸಲು ಒತ್ತಾಯಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಾರ್ಖಾನೆಯನ್ನು ನಿಯಮದ ಪ್ರಕಾರವಾಗಿ ನಡೆಸಲಾಗುತ್ತಿಲ್ಲ. ಹೀಗಾಗಿ, ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ವಿವರಿಸಿದರು.
ಈ ವೇಳೆ ನ್ಯಾಯಪೀಠ, ಕಾರ್ಖಾನೆ ಮುಚ್ಚುವ ಸಂಬಂಧ ಅರ್ಜಿದಾರರಿಂದ ಮಾಹಿತಿ ಪಡೆದು ಗುರುವಾರ ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿತು. ಅಲ್ಲದೇ, ಅರ್ಜಿದಾರರು 2021ರಲ್ಲಿ ಕಾರ್ಖಾನೆ ಖರೀದಿಸಿದ್ದು, ಈಗ 2024ನೇ ಇಸ್ವಿ. ಈ ಅವಧಿಯಲ್ಲಿ ನೀವು ಅಗತ್ಯ ಅನುಮತಿ ಪಡೆಯಬೇಕಿತ್ತು. ಕಾನೂನಿನ ಪ್ರಕಾರ ನೀವು ಅನುಮತಿ ಪಡೆಯುವವರೆಗೆ ಕಾರ್ಖಾನೆ ನಡೆಸಲಾಗದು ಎಂದು ತಿಳಿಸಿತು.
ಅಲ್ಲದೇ, ಕಾರ್ಖಾನೆ ನಡೆಸುವುದಿಲ್ಲ ಎಂಬ ಮುಚ್ಚಳಿಕೆಯನ್ನು ದಾಖಲಿಸಿಕೊಳ್ಳಬಹುದೇ? ಎಂದು ಪ್ರಶ್ನಿಸಿತು. ಹಾಗಾದಲ್ಲಿ ಸರ್ಕಾರ ನಿಮ್ಮ ಮನವಿ ಪರಿಗಣಿಸಲಿದೆ. ನಿಮ್ಮ ಮುಚ್ಚಳಿಕೆ ಪರಿಗಣಿಸಿ, ಆದೇಶ ಮಾಡುವಂತೆ ಸರ್ಕಾರಕ್ಕೆ ಆದೇಶಿಸುತ್ತೇವೆ. 2021ರಲ್ಲಿ ಕಾರ್ಖಾನೆ ಖರೀದಿಸಿದ್ದು, ಸರ್ಕಾರ ನಿಮ್ಮ ಮನವಿ ಪರಿಗಣಿಸಲಿಲ್ಲ ಎಂದಿದ್ದರೆ ಒಪ್ಪಬಹುದಿತ್ತು. ಈ ವಿಚಾರದಲ್ಲಿ ನೀವು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು? ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕ ಮುಚ್ಚುವಂತೆ ಕಲಬುರಗಿ ವಲಯದ ಹಿರಿಯ ಪರಿಸರ ಅಧಿಕಾರಿ ಜನವರಿ 18ರಂದು ನೋಟಿಸ್ ಜಾರಿ ಮಾಡಿದ್ದರು. ಆ ನಂತರ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ(ಕೆಎಸ್ಪಿಸಿಬಿ) ಜನವರಿ 25ರಂದು ಆದೇಶ ಮಾಡಿತ್ತು. ಈ ಎರಡೂ ಆದೇಶವನ್ನು ರದ್ದುಮಾಡಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಇಬ್ಬರು ಶಿಕ್ಷಕಿಯರು ದೋಷಮುಕ್ತ