ಬೆಂಗಳೂರು: ಭಾರತೀಯ ಕಾನೂನು ವರದಿಗಳು ಮತ್ತು ಕರ್ನಾಟಕ ತೀರ್ಪುಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಇ-ಐಎಲ್ಆರ್(ಇಂಡಿಯನ್ ಲಾ ರಿಪೋರ್ಟ್ಸ್-ಭಾರತೀಯ ಕಾನೂನು ವರದಿಗಳು)ಗಳನ್ನು ಹೈಕೋರ್ಟ್ ಪರಿಚಯಿಸಿದೆ.
ಭಾಷಾಂತರಿಸಿದ ತೀರ್ಪುಗಳ ಜೊತೆಗೆ ಡಿಜಿಟಲ್ ಕಾನೂನು ವರದಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಕಾನೂನು ಭಾಷಾಂತರ ಸಲಹಾ ಸಮಿತಿಯ ಉದ್ದೇಶವನ್ನು ದ್ವಿಭಾಷಾ ಇ-ಐಎಲ್ಆರ್ ಪೋರ್ಟಲ್ ಈಡೇರಿಸುತ್ತಿದೆ. 2023ರ ಡಿಸೆಂಬರ್ 16ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಅನಾವರಣಗೊಳಿಸಿದ್ದು, ಇದರ ಭಾಗವಾಗಿ ಪೋರ್ಟಲ್ ಈಗ ಪ್ರಾರಂಭವಾಗಿದೆ.
ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವುದಕ್ಕಾಗಿ ಈ ವ್ಯವಸ್ಥೆ ಪರಿಚಯಿಸಲಾಗಿದೆ. ಬಳಕೆದಾರಸ್ನೇಹಿ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇ-ಕೋರ್ಟ್ಸ್ ಯೋಜನೆಯ ಮೂರನೇ ಹಂತದ ಭಾಗವಾಗಿ ಪರಿಚಯಿಸಲಾಗಿದೆ. ಹೈಕೋರ್ಟ್ನ ಸಮಗ್ರ ಮತ್ತು ವರದಿ ಮಾಡಬಹುದಾದ ಕೇಸ್ ಲಾಗಳನ್ನು ಇದು ಒಳಗೊಂಡಿದೆ. ಹೈಕೋರ್ಟ್ ನೆರವಿನೊಂದಿಗೆ ಕರ್ನಾಟಕ ಕಾನೂನು ವರದಿಗಾರಿಕೆ ಒಕ್ಕೂಟ ಹೊರತಂದಿದೆ.
ಸುಪ್ರೀಂ ಕೋರ್ಟ್‌ನ 2,000ಕ್ಕೂ ಅಧಿಕ ತೀರ್ಪುಗಳನ್ನು ಇ-ಐಎಲ್ಆರ್ ಪೋರ್ಟಲ್ ಒಳಗೊಂಡಿದೆ. ಇಂಗ್ಲಿಷ್ ಜೊತೆಗೆ ಪರ್ಯಾಯವಾಗಿ ಪೋರ್ಟಲ್ನಲ್ಲಿ ಕನ್ನಡ ವರದಿಗಳನ್ನೂ ಅಪ್ಲೋಡ್ ಮಾಡಲಾಗುತ್ತಿದೆ. ಕರ್ನಾಟಕ ಹೈಕೋರ್ಟ್ನ ಭಾಷಾಂತರಿಸಿದ ಕನ್ನಡ ತೀರ್ಪುಗಳೂ ಲಭ್ಯವಾಗುವಂತೆ ಮಾಡಲಾಗಿದೆ. ಪೋರ್ಟಲ್ ಕರ್ನಾಟಕ ಹೈಕೋರ್ಟ್ ತೀರ್ಪುಗಳನ್ನಷ್ಟೇ ಅಲ್ಲದೇ ಸಂಪಾದಕರ ನುಡಿಯನ್ನೂ ಒಳಗೊಂಡಿರಲಿದೆ. ಇದರಲ್ಲಿ ವರದಿ ಮಾಡಬಹುದಾದ ಎಲ್ಲ ತೀರ್ಪುಗಳೂ ಸೇರಿರಲಿದೆ.
ತಮಗೆ ಗೊತ್ತಿರುವ ಭಾಷೆಯಲ್ಲಿ ಡಿಜಿಟಲ್ ಮಾದರಿಯಲ್ಲಿ ಸರ್ಚ್ ಮಾಡಲು ಅನುಕೂಲ ಮಾಡಿಕೊಡುವ ಮೂಲಕ ಇ-ಐಎಲ್ಆರ್ ಪೋರ್ಟಲ್ ಎಲ್ಲರೂ ನ್ಯಾಯದಾನ ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಹೈಕೋರ್ಟ್ ಈ ಯೋಜನೆಯು ಮುದ್ರಣ ಮಾಧ್ಯಮಕ್ಕೆ ಪರ್ಯಾಯವಾಗಿ ಕಾನೂನು ಕ್ಷೇತ್ರದಲ್ಲಿರುವವರಿಗೆ ಅಮೂಲ್ಯವಾದ ಕಾನೂನು ಸಂಪನ್ಮೂಲ ಒದಗಿಸಲಿದೆ. ಡಿಜಿಟಲ್ ರೂಪದಲ್ಲಿರುವುದರಿಂದ ವೆಚ್ಚವೂ ಕಡಿಮೆಯಾಗಲಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಐಎಲ್ಆರ್ ಪೋರ್ಟಲ್ಗೆ https://hck.gov.in/ilrಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಮಾತೃಭಾಷೆ ಕಲಿಕೆ ಕಡ್ಡಾಯವಾಗಬೇಕೆಂದು ಪ್ರತಿಪಾದಿಸಿದ್ದ ಕುವೆಂಪು ಅಭಿಪ್ರಾಯಕ್ಕೆ ನನ್ನ ಸಹಮತ ಇದೆ; ಮುಖ್ಯ ನ್ಯಾ. ಅಂಜಾರಿಯ