ಬೆಂಗಳೂರು: ಮಹಿಳಾ ವಕೀಲರು ಹಾಗೂ ಒಂದು ಸಮುದಾಯದ ಜನ ನೆಲೆಸಿರುವ ಪ್ರದೇಶದ ಬಗ್ಗೆ ಹೇಳಿಕೆ ನೀಡಿದ್ದ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ನಡೆದ ನ್ಯಾಯಾಲಯದ ಕಲಾಪದ ವೇಳೆ ಅವರು, ವಿಚಾರಣೆ ಸಂದರ್ಭದಲ್ಲಿ ತಾವು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಯಾವುದೇ ಉದ್ದೇಶಪೂರ್ವಕವಾಗಿದ್ದಲ್ಲ. ಇದರಿಂದ ಯಾವುದೇ ವ್ಯಕ್ತಿ, ಸಮುದಾಯಕ್ಕೆ ನೋವುಂಟಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಇತ್ತೀಚೆಗೆ ನಡೆದಿದ್ದ ಕಲಾಪದ ವೇಳೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ನೀಡಿದ್ದ ಹೇಳಿಕೆಗಳ ಕುರಿತಂತೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದ್ದ ಸೂಪ್ರೀಂಕೋರ್ಟ್, ಈ ಸಂಬಂಧ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿತ್ತು.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್‌ರಾಯ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠ ಸಭೆ ನಡೆಸಿ ಈ ಆದೇಶ ನೀಡಿದೆ.
ಅಲ್ಲದೆ, ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕಲಾಪದ ನೇರ ಪ್ರಸಾರವನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸುವಂತೆ ಬೆಂಗಳೂರು ವಕೀಲರ ಸಂಘ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿಗೆ ಮನವಿ ಸಲ್ಲಿಸಿತ್ತು.
ಬಳಿಕ, ಪೂರ್ವಾನುಮತಿ ಪಡೆಯದೇ ಲೈವ್ ಸ್ಟ್ರೀಮಿಂಗ್‌ನ ಮರು ಪ್ರಸಾರ, ವರ್ಗಾವಣೆ, ಅಪ್‌ಲೋಡ್ ಮಾಡುವುದು, ಪೋಸ್ಟ್ ಮಾಡುವುದು, ಮಾರ್ಪಾಡು ಮಾಡುವುದು ಪ್ರಸಾರ ಅಥವಾ ಮರು ಪ್ರಸಾರ ಮಾಡುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿತ್ತು.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೇಳಿಕೆ: ವರದಿ ಕೇಳಿದ ಸುಪ್ರೀಂಕೋರ್ಟ್ - Supreme Court