ಬೆಂಗಳೂರು: ಬೆಳಗಾವಿಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡೆಸಲು ಉದ್ದೇಶಿಸಿರುವ ಕಾನೂನುಬಾಹಿರ ಕರಾಳ ದಿನ ಪ್ರತಿಭಟನೆಗೆ ಮಧ್ಯಂತರ ಪ್ರತಿಬಂಧಕಾದೇಶ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಎಂಇಎಸ್‌ಗೆ ಇಂದು ಹೈಕೋರ್ಟ್ ನೋಟಿಸ್ ಜಾರಿ ಮಾಡಿತು.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಮಲ್ಲಪ್ಪ ಚಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(PIL) ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎನ್.ಪಿ.ಅಮೃತೇಶ್, 2019ರಿಂದ ಎಂಇಎಸ್ ಉಗ್ರ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಗನ್ ಕೊಂಡೊಯ್ಯಲಾಗಿದೆ. ಸರ್ಕಾರ ಅನುಮತಿಸದಿದ್ದರೂ ಪ್ರತಿಭಟನೆ ನಡೆಸುವ ಉದ್ಧಟತನವನ್ನು ಎಂಇಎಸ್ ಪ್ರದರ್ಶಿಸುತ್ತಾ ಬಂದಿದೆ. ಇಂಥವರ ವಿರುದ್ಧ ಪೊಲೀಸರು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಸರ್ಕಾರದ ಎಚ್ಚರಿಕೆಗೆ ಎಂಇಎಸ್ ಕಾರ್ಯಕರ್ತರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕಳೆದ ಮೂರು ನಾಲ್ಕು ವರ್ಷಗಳಿಂದ ದುರ್ವರ್ತನೆ ತೋರುತ್ತಿದ್ದಾರೆ. ಮಾರಕಾಸ್ತ್ರಗಳನ್ನು ಪ್ರತಿಭಟನೆಗೆ ಕೊಂಡೊಯ್ಯಲಾಗುತ್ತಿದೆ. ಎಂಇಎಸ್ ಅಧ್ಯಕ್ಷರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವದ ಬಳಿಕ ಮಾಧ್ಯಮಗಳ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅರ್ಜಿಯನ್ನು ಬಾಕಿ ಉಳಿಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು, ಹೈಕೋರ್ಟ್‌ನ ಸಮನ್ವಯ ಪೀಠವು ಕನ್ನಡ ರಾಜ್ಯೋತ್ಸವನ್ನು ನಿರಾತಂಕವಾಗಿ ನಡೆಸಲು ಸರ್ಕಾರ ಮತ್ತು ಪೊಲೀಸರು ಕ್ರಮಕೈಗೊಳ್ಳಬೇಕು. ಕಾನೂನು ಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಈ ಆದೇಶದ ಅನ್ವಯ ಮುಚ್ಚಳಿಕೆ ನೀಡಲು ಸಿದ್ಧವಿದ್ದೇವೆ. ಹೀಗಾಗಿ, ಪಿಐಎಲ್ ಸಲ್ಲಿಸುವ ಸನ್ನಿವೇಶವೇ ಉದ್ಭವಿಸಿಲ್ಲ. ಪ್ರಚಾರಕ್ಕಾಗಿ ಪಿಐಎಲ್ ಸಲ್ಲಿಕೆ ಮಾಡಲಾಗಿದ್ದು, ಅದನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಹಾಗೂ ಎಂಇಎಸ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.
ಅಂತಿಮವಾಗಿ ಪೀಠ, "ಸಂವಿಧಾನ ಮತ್ತು ಮಾನವ ಹಕ್ಕುಗಳನ್ನು ಒಪ್ಪಿಕೊಂಡ ಬಳಿಕ ಎಲ್ಲರೂ ಅದಕ್ಕೆ ಬದ್ಧರಾಗಿಬೇಕು" ಎಂದು ಮೌಖಿಕವಾಗಿ ಹೇಳಿತು.
ಇದನ್ನೂ ಓದಿ: ಅರುಣ್ ಯೋಗಿರಾಜ್, ಹುಲಿಕಲ್ ನಟರಾಜ್ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ