ಬೆಂಗಳೂರು: ಚಾಮರಾಜಪೇಟೆ ಛಲವಾದಿಪಾಳ್ಯದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯ ಜಾಗವನ್ನು ಮೌಲಾನಾ ಅಜಾದ್ ಮುರಾರ್ಜಿ ವಸತಿ ಶಾಲೆಗೆ ಹಸ್ತಾಂತರಿಸುವ ಸಂಬಂಧ ಫೆ. 26ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ವಕೀಲ ಗಿರೀಶ್ ಭಾರಧ್ವಜ್ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ. ವಿ ಅರವಿಂದ್ ಅವರ ವಿಭಾಗೀಯ ಪೀಠ, ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರ ಗಿರೀಶ್ ಭಾರಧ್ವಜ್ ಪರ ವಾದ ಮಂಡಿಸಿದ ವಕೀಲ ಪಿ. ವೆಂಕಟೇಶ್ ದಳವಾಯಿ, ಛಲವಾದಿ ಪಾಳ್ಯದಲ್ಲಿ ಸುಮಾರು 200 ವರ್ಷಗಳಿಂದ ಬೆಂಗಳೂರು ನಗರದಲ್ಲಿ ಪಶುಗಳಿಗೆ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತ ಇಲಾಖೆಯ ಸುಪರ್ದಿಗೆ ಸ್ಥಳಾಂತರ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದರು.ಅಲ್ಲದೆ, ಛಲವಾದಿಪಾಳ್ಯದಲ್ಲಿರುವ ಪಶುವೈದ್ಯ ಆಸ್ಪತ್ರೆಯನ್ನು ಈಗಿರುವ ಸ್ಥಳದಲ್ಲೇ ಮುಂದುವರಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠವನ್ನು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ಸಂಬಂಧ ಸರ್ಕಾರ ಹೊರಡಿಸಿದ ಆದೇಶಕ್ಕೆ ಈ ಹಿಂದಿನ ವಿಚಾರಣೆಯಲ್ಲಿ ನೀಡಿದ ತಡೆಯಾಜ್ಞೆ ವಿಸ್ತರಿಸಿತು. ಅಲ್ಲದೆ, ಪಶುವೈದ್ಯಕೀಯ ಆಸ್ಪತ್ರೆ ಈಗಿರುವ ಸ್ಥಳದಲ್ಲೇ ಕಾರ್ಯನಿರ್ವಹಿಸಲಿದೆ ಹಾಗೂ ಅಲ್ಲಿನ ವೈದ್ಯರನ್ನಾಗಲಿ ಅಥವಾ ಸಿಬ್ಬಂದಿಗಳನ್ನಾಗಲಿ ಸ್ಥಳಾಂತರ ಮಾಡದಂತೆ ಮಧ್ಯಂತರ ಆದೇಶ ನೀಡಿದೆ.
ಮುಂದುವರಿದು ಪ್ರಕರಣ ಸಂಬಂಧ ರಾಜ್ಯ ಸರ್ಕಾರ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಸಚಿವ ಜಮೀರ್ ಅಹ್ಮದ್ ಖಾನ್ಗೆ ನೋಟಿಸ್ ಜಾರಿಗೊಳಿಸಿದೆ. ವಿಚಾರಣೆಯನ್ನು ಜು.23 ಕ್ಕೆ ಮುಂದೂಡಿದೆ.
ಅರ್ಜಿಯಲ್ಲೇನಿದೆ : 1860ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಎಂ. ಮುತೋಜಿರಾವ್ ಶಿಂಧೆ ಎಂಬುವರು ಮಿಂಟೋ ಆಸ್ಪತ್ರೆ, ಅಟ್ಟಾರ ಕಚೇರಿ ದಾನವಾಗಿ ನೀಡಿದ್ದರು. ಇದೇ ಕಾರಣಕ್ಕೆ ಇಂಗ್ಲೆಂಡ್ ರಾಣಿ ಎಲಿಜಿಬೆತ್ ಅವರು ಅತ್ಯಂತ ಬೆಲೆಬಾಳುವ ವಜ್ರದ ಉಂಗುರ ನೀಡಿದ್ದರು. ಅಲ್ಲದೆ, ಬೆಂಗಳೂರಿನ ಪಶುಗಳಿಗೆ ಚಿಕಿತ್ಸಾಲಯ ನಿರ್ಮಾಣಕ್ಕಾಗಿ ಚಾಮರಾಜಪೇಟೆಯಲ್ಲಿನ ಈ ಆಸ್ಪತ್ರೆಯ ಜಾಗವನ್ನು ಮುತೋಜಿರಾವ್ ಅವರೇ ದಾನವಾಗಿ ನೀಡಿದ್ದರು.
ಇದೀಗ ಅಲ್ಪಸಂಖ್ಯಾತರ ಇಲಾಖೆಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಗಳಿಗಾಗಿ ಈ ಆಸ್ಪತ್ರೆ ಇರುವ ಜಾಗವನ್ನು ಪಶು ಸಂಗೋಪನೆ ಇಲಾಖೆಯಿಂದ ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಪಶು ಸಂಗೋಪನೆ ಇಲಾಖೆಯು ಈ ಸ್ಥಳ ಪಶು ಚಿಕಿತ್ಸಾಲಯಕ್ಕೆ ಮಾತ್ರ ಬಳಕೆ ಮಾಡಬೇಕಾಗಿದೆ. ಇತರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ತಿಳಿಸಿ ತಿರಸ್ಕರಿಸಿತ್ತು. ಅಲ್ಲದೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯರು ಸುಮಾರು 15 ಲಕ್ಷಕ್ಕೂ ಹೆಚ್ಚು ರೂ.ಗಳನ್ನು ಸಂಸದರ ನಿಧಿಯಿಂದ ಮಂಜೂರು ಮಾಡಿ, ಆಸ್ಪತ್ರೆಗೆ ಅಗತ್ಯವಿರುವ ಪರಿಕರಗಳನ್ನು ಕೊಡಿಸಿದ್ದಾರೆ. ಆದರೆ, 26 ರಂದು ರಾಜ್ಯ ಸರ್ಕಾರ ಈ ಪಶು ಆಸ್ಪತ್ರೆಯನ್ನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರ ಮಾಡಿದೆ.
ಅಲ್ಲದೆ, ಆಸ್ಪತ್ರೆ ಮತ್ತು ಅಲ್ಲಿಯ ಸಿಬ್ಬಂದಿಯನ್ನು ಜಯನಗರಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಆದೇಶಿಸಿದೆ. ಮಾತ್ರವಲ್ಲದೆ ಈ ಸ್ಥಳವನ್ನು ಪಶು ಚಿಕಿತ್ಸೆಗೆ ಮಾತ್ರ ಮೀಸಲಿಡಬೇಕು ಮತ್ತು ಯಾವುದೇ ಇಲಾಖೆಗೆ ಸ್ಥಳಾಂತರ ಮಾಡಬಾರದು ಎಂದು ದಾನ ಮಾಡಿದ್ದ ಮುತೋಜಿರಾವ್ ಶಿಂಧೆ ಅವರ ಮರಿಮೊಮ್ಮಗ ರಾಮಚಂದ್ರ ರಾವ್ ಶಿಂಧೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಲಾಗಿದ್ದು, ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ : ಭೂಸ್ವಾಧೀನ, ಡಿನೋಟಿಫೀಕೇಷನ್ ಮಾಹಿತಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಸಿಎಸ್‌ಗೆ ನಿರ್ದೇಶನ - High Court