ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಅಮಿತ್ ದಿಗ್ವೇಗರ್, ಎಚ್.ಎಲ್ ಸುರೇಶ್ ಮತ್ತು ಕೆ.ಟಿ ಮವೀನ್‌ಕುಮಾರ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಮಂಜೂರು ಮಾಡಲು ಮೂರು ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಇನ್ನಷ್ಟೇ ಆದೇಶದ ವಿಸ್ತೃತ ಪ್ರತಿ ಲಭ್ಯವಾಗಬೇಕಾಗಿದೆ.
ಪ್ರಕರಣದಲ್ಲಿ ಹನ್ನೊಂದನೆಯ ಆರೋಪಿ ಮೋಹನ್ ನಾಯಕ್ಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಅಲ್ಲದೇ, ಕಳೆದ ಆರು ವರ್ಷಗಳ ಕಾಲ ಆರೋಪಿಗಳು ವಿಚಾರಣಾ ದೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. 'ವಿಚಾರಣೆ ಪೂರ್ಣಗೊಳ್ಳದೇ ಸುಧೀರ್ಘವಾಗಿ ಜೈಲಿನಲ್ಲಿಡುವಂತಿಲ್ಲ ಎಂಬುದಾಗಿ ಹಲವು ತೀರ್ಪುಗಳಿವೆ' ಎಂದು ಅಭಿಪ್ರಾಯ ಪಟ್ಟಿರುವ ಪೀಠ, ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಈ ಹಿಂದೆ ನಡೆದ ವಿಚಾರಣೆ ವೇಳೆ, ಪ್ರಕರಣದ ಹನ್ನೊಂದನೆ ಆರೋಪಿ ಮೋಹನ್ ನಾಯಕ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಮೋಹನ್ ನಾಯಕ್ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿತ್ತು. ಜತೆಗೆ, ಮೋಹನ್ ನಾಯಕ್ ಜಾಮೀನು ಮಂಜೂರು ಮಾಡಿರುವ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರು ಕೆಲಸ ಕಚೇರಿಯಿಂದ ಮನೆಗೆ ಮರಳುವ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಅವರ ಮೇಲಿತ್ತು.
ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್ ಪಾಟೀಲ್, ಶ್ರೀಕಾಂತ್ ಪಂಗರ್ಕರ್, ಕೆ.ಟಿ. ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಕೇಸ್: ವಿಶೇಷ ತನಿಖೆ ನಡೆಸಿ ವರದಿ ಸಲ್ಲಿಸಲು ಕೋರಿದ್ದ ಮನವಿ ತಿರಸ್ಕೃತ - Gauri Lankesh Murder Case