ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ಕುರಿತಂತಹ ಅರ್ಜಿಗಳ ಸಂಖ್ಯೆಗಳು ಹೆಚ್ಚಾಗುತ್ತಿದ್ದಂತೆ, ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಮಾರ್ಗಸೂಚಿಗಳನ್ನು ರಚನೆ ಮಾಡಿದೆ. ಬಿಬಿಎಂಪಿ ಕ್ರಮ ಪ್ರಶ್ನಿಸಿ ಬೆಂಗಳೂರಿನ ಷರೀಫ್ ಕನ್‌ಸ್ಟ್ರಕ್ಷನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಅವೈಜ್ಞಾನಿಕ ತೆರಿಗೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸ್ವತ್ತುಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಏಕಾಏಕಿ ಬೇಡಿಕೆ ನೋಟಿಸ್‌ಗಳನ್ನು (ಡಿಮ್ಯಾಂಡ್ ನೋಟಿಸ್)ನೀಡಲಾಗಿದೆ. ಶೋಕಾಸ್ ನೋಟಿಸ್‌ಗಳನ್ನು ನೀಡಿಲ್ಲ. ಬಿಬಿಎಂಪಿ ಕಾಯಿದೆ 2020 ಅನ್ನು ಪಾಲಿಕೆ ಅಧಿಕಾರಿಗಳು ಪಾಲನೆ ಮಾಡಿಲ್ಲ. ಆದರೆ, ಇಂತಹ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸದೇ ದಿಢೀರ್ ನೋಟಿಸ್‌ಗಳನ್ನು ನೀಡಿರುವುದರಿಂದ ಅವುಗಳನ್ನು ರದ್ದುಗೊಳಿಸಬೇಕು ಎಂಬ ಮನವಿ ಇದೆ.
ನ್ಯಾಯಾಲಯದ ಮುಂದೆ ಹಲವು ಪ್ರಕರಣಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಇಂತಹ ಪ್ರಕರಣಗಳಲ್ಲಿ ತೆರಿಗೆ ಬೇಡಿಕೆ ನೋಟಿಸ್ ನೀಡುವಂತಿಲ್ಲ. ಮೊದಲು ನೋಟಿಸ್ ನೀಡಬೇಕು. ಆ ನಂತರ ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಬೇಕು. ಹೀಗೆ ಯಾವ್ಯಾವ ಪ್ರಕ್ರಿಯೆ ಕೈಗೊಳ್ಳಬೇಕು ಎಂಬ ಬಗ್ಗೆ ಸುದೀರ್ಘ ಆದೇಶ ಹೊರಡಿಸಿದೆ. ಹಾಗಾಗಿ ಬಿಬಿಎಂಪಿ ಅಧಿಕಾರಿಗಳು ಇನ್ನು ಮುಂದೆ ಏಕಾಏಕಿ ಹೆಚ್ಚುವರಿ ತೆರಿಗೆ ಬೇಡಿಕೆ ನೋಟಿಸ್ ನೀಡುವಂತಿಲ್ಲ. ಬಿಬಿಎಂಪಿ ಕಾಯಿದೆ 2020ರಲ್ಲಿ ಉಲ್ಲೇಖಿಸಿರುವ ಎಲ್ಲ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯದ ನಿರ್ದೇಶನಗಳು ಹೀಗಿವೆ
- ಮಾಲೀಕರು ತೆರಿಗೆ ಪಾವತಿಸಿದ ನಂತರ ಪರಿಶೀಲನೆ ವೇಳೆ ಕಡಿಮೆ ತೆರಿಗೆ ಪಾವತಿಸಿರುವುದು ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಬಿಬಿಎಂಪಿ ಮೊದಲಿಗೆ ಸೆಕ್ಷನ್ 144 (13) ಅಡಿ ನೋಟಿಸ್ ಜಾರಿಗೊಳಿಸಬೇಕು.
- ಪಾಲಿಕೆ ಮುಖ್ಯ ಆಯುಕ್ತರು ಅಥವಾ ಅವರಿಂದ ನಿಯೋಜಿಸಲ್ಪಟ್ಟ ಅಧಿಕಾರಿ ನಿಗದಿತ ಕಟ್ಟಡಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ ಕಟ್ಟಡದ ವಿಸ್ತೀರ್ಣದ ಅಳತೆ ಮಾಡಬೇಕು.
- ಅಧಿಕಾರಿಗಳು ತೆರಿಗೆ ಮರು ಮೌಲ್ಯಮಾಪನ ಉದ್ದೇಶದಿಂದ ಸ್ಥಳ ಪರಿಶೀಲನೆ ಮತ್ತು ಸರ್ವೇ ನಡೆಸುವ ಸಂದರ್ಭದಲ್ಲಿ ಮಾಲೀಕರು ಅಥವಾ ಸ್ವತ್ತಿನಲ್ಲಿ ವಾಸಿಸುತ್ತಿರುವವರು ಸರಿಯಾದ ಮಾಹಿತಿ ಒದಗಿಸಬೇಕು.
- ಒಂದು ವೇಳೆ ಆಸ್ತಿಯ ಮಾಲೀಕರು ಘೋಷಿಸಿದ್ದ ತೆರಿಗೆಯಲ್ಲಿ ತಪ್ಪು ಕಂಡು ಬಂದಲ್ಲಿ ನಿಯಮದಂತೆ ನೋಟಿಸ್ ನೀಡಬೇಕು.
- ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವಾಗ ಮಾಲೀಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ ಅಧಿಕಾರಿ ಅದನ್ನು ದಾಖಲಿಸಿಕೊಂಡು, ಆಸ್ತಿ ಪರಿಶೀಲನೆ ನಡೆಸಬಹುದು.
- ತೆರಿಗೆ ಮರು ಮೌಲ್ಯಮಾಪನದ ವೇಳೆ ಅಧಿಕಾರಿಗಳು ವಲಯ ಸೇರಿದಂತೆ ಇನ್ನಿತರ ವಾಸ್ತವಾಂಶಗಳನ್ನು ಪರಿಗಣಿಸಬೇಕಾಗುತ್ತದೆ. ಆಸ್ತಿ ಪರಿಶೀಲನೆ ನಂತರ ಸಂಬಂಧಿಸಿದ ಅಧಿಕಾರಿ ಸೆಕ್ಷನ್ 144(15)ರ ಅನ್ವಯ ವರದಿ ಸಿದ್ಧಪಡಿಸಬೇಕು.
- ವರದಿ ಸಿದ್ಧಪಡಿಸುವಾಗ ರ‍್ಯಾಂಡಮ್ ಪರಿಶೀಲನೆ ಅಥವಾ ತೆರಿಗೆ ಪಾವತಿಸಿಲ್ಲ ಅಥವಾ ಸ್ವಯಂ ಆಸ್ತಿ ತೆರಿಗೆ ಘೋಷಣೆಯಲ್ಲಿ ದೋಷ ಏನಾಗಿದೆ ಎಂಬುದನ್ನು ದಾಖಲಿಸಿ ಅದರಂತೆ ವರದಿ ಸಿದ್ಧಪಡಿಸಬೇಕು ಮತ್ತು ಒಂದು ವೇಳೆ ನಿಯಮ ಉಲ್ಲಂಘಿಸಿದ್ದರೆ ಆಗ ಸೆಕ್ಷನ್ 144(15) (ಬಿ) ಅನ್ವಯ ದಂಡ ಲೆಕ್ಕ ಹಾಕಬೇಕು.
- ಆನಂತರವೇ ಮುಖ್ಯ ಆಯಕ್ತರು ಅಥವಾ ಸಂಬಂಧಿಸಿದ ಅಧಿಕಾರಿ ತೆರಿಗೆ ಪಾವತಿದಾರರಿಗೆ ಮರು ಮಾಪನದ ನಂತರ ಇಷ್ಟು ತೆರಿಗೆ ಪಾವತಿಸಬೇಕಾಗಿದೆ ಎಂಬ ಬೇಡಿಕೆಯುಳ್ಳ ನೋಟಿಸ್ ಅನ್ನು ಲಿಖಿತ ರೂಪದಲ್ಲಿ ನೀಡಿ, ಅವರ ಆಕ್ಷೇಪಣೆ ಏನಾದರೂ ಇದ್ದರೆ ಅವುಗಳನ್ನು ಸಲ್ಲಿಸಲು 30 ದಿನ ಕಾಲಾವಕಾಶ ನೀಡಬೇಕು.
- ಬಳಿಕ ಮುಖ್ಯ ಆಯುಕ್ತರು ಅಥವಾ ಸಂಬಂಧಿಸಿದ ಅಧಿಕಾರಿ, ತೆರಿಗೆ ಪಾವತಿದಾರರು ಸಲ್ಲಿಸಿದ ಆಕ್ಷೇಪಣೆಯನ್ನು 60 ದಿನಗಳಲ್ಲಿ ಪರಿಶೀಲನೆ ನಡೆಸಬೇಕು.
- ಬಳಿಕ ಪಾಲಿಕೆ ಹೆಚ್ಚುವರಿ ತೆರಿಗೆ ಪಾವತಿಗೆ ಅಂತಿಮ ಆದೇಶ ಹೊರಡಿಸಬೇಕು.
ಇದನ್ನೂ ಓದಿ: ಬೆಂಗಳೂರು ದೇಶದ ಶೈಕ್ಷಣಿಕ ರಾಜಧಾನಿಯಾಗಿ ಬೆಳೆಯುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್