ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಮತ್ತಿತರರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಇಂದು ತೀರ್ಪು ಕಾಯ್ದಿರಿಸಿದೆ. ಇದೇ ವೇಳೆ, ದರ್ಶನ್ಗೆ ಚಿಕಿತ್ಸೆ ಪಡೆಯಲು ಮಂಜೂರು ಮಾಡಿದ್ದ ಮಧ್ಯಂತರ ಜಾಮೀನು ಆದೇಶ ವಿಸ್ತರಿಸಿತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ದರ್ಶನ್ ಆರೋಗ್ಯ ಮತ್ತು ಚಿಕಿತ್ಸೆ ಕುರಿತಂತೆ 5 ವೈದ್ಯಕೀಯ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ ಶಸ್ತ್ರಚಿಕಿತ್ಸೆ ಕುರಿತು ವಿವರಿಸಿದರು.
ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್, ರೇಣುಕಾಸ್ವಾಮಿಯನ್ನು ಮೋಸದಿಂದ ಅಪಹರಣ ಮಾಡಲಾಗಿದೆ. ದರ್ಶನ್ ಅವರನ್ನು ಭೇಟಿ ಮಾಡಿಸಿ ಕರೆತರುವುದಾಗಿ ಆರೋಪಿಗಳು ತಿಳಿಸಿದ್ದರು. ಇದೂ ಸಹ ಅಪಹರಣದ ವ್ಯಾಖ್ಯಾನದಲ್ಲಿ ಸೇರುತ್ತದೆ. ಅಪಹರಣದ ಜೊತೆಗೆ ರಾಬರಿ ಕೂಡಾ ನಡೆಸಿದ್ದಾರೆ. ಮೃತ ರೇಣುಕಾಸ್ವಾಮಿ ದೇಹದ ಮೇಲಿದ್ದ ಕರಡಿಗೆ ಕಿತ್ತುಕೊಂಡಿದ್ದಾರೆ. ವಿದ್ಯುತ್ ಶಾಕ್ ನೀಡಿದ್ದಾರೆ. ಘಟನೆ ನಡೆದ 30 ನಿಮಿಷದಲ್ಲಿ ದರ್ಶನ್ ಅಲ್ಲಿಗೆ ಬಂದು ರೇಣುಕಾಸ್ವಾಮಿಯನ್ನು ಕಾಲಿನಿಂದ ಒದ್ದಿದ್ದಾರೆ. ಮೊದಲ ಆರೋಪಿ ಪವಿತ್ರಾ ಗೌಡ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಅದೇ ಚಪ್ಪಲಿಯಲ್ಲಿ ದರ್ಶನ್ ಕೂಡ ಹೊಡೆದಿದ್ದಾರೆ ಎಂದು ವಾದ ಮಂಡಿಸಿದರು.
ಮುಂದುವರೆದು, ಪವಿತ್ರಾ ಗೌಡರನ್ನು ಬಿಟ್ಟು ಬರುವಂತೆ ಪುನೀತ್ ಎಂಬವರಿಗೆ ದರ್ಶನ್ ಸೂಚಿಸಿದ್ದರು. ಪುನೀತ್ ವಾಪಸ್ ಬಂದಾಗಲೂ ರೇಣುಕಾಸ್ವಾಮಿಗೆ ದರ್ಶನ್ ಹೊಡೆಯುತ್ತಿದ್ದರು. ನಂತರ ದರ್ಶನ್ ಹೊರಟಾಗ ಆರೋಪಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಈ ಫೋಟೋವನ್ನು ಸಹ ಪೊಲೀಸರು ಪಡೆದುಕೊಂಡಿದ್ದಾರೆ. ದರ್ಶನ್ ಹೊಡೆದ ಜಾಗದಲ್ಲಿ ರಸ್ತಸ್ರಾವ ಆದ ಕುರಿತು ಆರೋಪಿಗಳು ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಎದೆಯ ಮೂಳೆ ಮುರಿದಿರುವ ಕುರಿತು ಉಲ್ಲೇಖಿಸಲಾಗಿದೆ. ಎದೆಯ 17 ಮೂಳೆಗಳು ಮುರಿದಿವೆ. ಗಾಯದ ಗುರುತುಗಳಿವೆ. ಘಟನೆಗೆ ದರ್ಶನ್ ಹಾಗೂ ಆರೋಪಿಗಳ ಉಪಸ್ಥಿತಿಗೆ ಫೋಟೋಗಳು ಸಾಕ್ಷಿಯಾಗಿವೆ. ಮರ್ಮಾಂಗಕ್ಕೂ ಗಾಯವಾಗಿರುವುದನ್ನು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಕೊನೆಯ ಊಟ ಮಾಡಿದ ಒಂದೆರಡು ಗಂಟೆಯಲ್ಲಿ ಪ್ರಾಣ ಹೋಗಿದೆ. ಈ ಎಲ್ಲಾ ವಿಚಾರಗಳು ಪೋಸ್ಟ್ ಮಾರ್ಟಮ್ ವರದಿಯಲ್ಲಿವೆ. ದೇಹದಲ್ಲಿರುವ ಆಹಾರ, ದ್ರವ ಪರಿಶೀಲಿಸಿ ವರದಿ ಸಲ್ಲಿಸಲಾಗಿದೆ. ವೈದ್ಯರ ಅಭಿಪ್ರಾಯ ಮತ್ತು ಆರೋಪ ಪಟ್ಟಿಯಲ್ಲಿರುವ ಅಂಶಗಳು ಹೋಲಿಕೆಯಾಗಿವೆ ಎಂದು ಪ್ರಾಸಿಕ್ಯೂಷನ್ ಪರ ವಿಶೇಷ ಅಭಿಯೋಜಕರು ವಾದ ಮಂಡಿಸಿದರು.
ದುನಿಯಾ ವಿಜಿ, ಪಾನಿಪೂರಿ ಕಿಟ್ಟಿ ವಿರುದ್ಧದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಕೃತ್ಯ ಅಪರಾಧವಾಗುವುದಿಲ್ಲ ಎಂಬ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಎರಡನೇ ಆರೋಪಿ ದರ್ಶನ್ ಬಟ್ಟೆ, ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ. ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರು ರೇಣುಕಾಸ್ವಾಮಿ ರಕ್ತವಿದ್ದ ಸೀಲ್ ಮಾಡಿದ ಬಾಟಲ್ ಅನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ದರ್ಶನ್ ಕಳುಹಿಸಿದ್ದ ಹಣವನ್ನು ರಿಕವರಿ ಮಾಡಲಾಗಿದೆ ಎಂದು ವಿವರಿಸಿದರು.
ಅರ್ಜಿದಾರರು ಮತ್ತು ಸರ್ಕಾರದ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಅವರ ವಾದ ಪೂರ್ಣಗೊಂಡ ಸಂದರ್ಭದಲ್ಲಿ ದರ್ಶನ್ ಪರ ವಕೀಲರು, ಮಧ್ಯಂತರ ಆದೇಶ ವಿಸ್ತರಿಸಲು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಪೀಠ, ಮುಂದಿನ ದಿನಾಂಕದವರೆಗೂ ಮಧ್ಯಂತರ ಜಾಮೀನು ವಿಸ್ತರಿಸಿತು.
ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ: ಪವಿತ್ರಾ ಗೌಡ ಪರ ವಕೀಲರ ವಾದವೇನು?