ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಬದಲಾಗಿ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಅಡಿಯಲ್ಲಿ ಅಪರಾಧ ಪ್ರಕರಣಗಳನ್ನು ದಾಖಲಿಸಲು ಎಲ್ಲ ಪೊಲೀಸ್ ಠಾಣೆಗಳಿಗೆ ಜಾಗೃತಿ ಮೂಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಐಪಿಸಿ ರದ್ದಾದ ಬಳಿಕವೂ ಅದೇ ಕಾಯಿದೆಯಡಿ ಜುಲೈ 1 ರಂದು ಪ್ರಕರಣ ದಾಖಲಿಸಿದ್ದ ಕ್ರಮ ಮೈಸೂರಿನ ಗೀತಾ ಅರಸ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಬಿಎನ್ಎಸ್ ಅಡಿಯಲ್ಲಿ ದೂರು ದಾಖಲಿಸಬೇಕಾದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಮುಂದಿನ ವಿಚಾರಣೆವರೆಗೂ ತಡೆ ನೀಡಲಾಗುತ್ತಿದೆ. ಅಲ್ಲದೆ, ಪ್ರಕರಣದಲ್ಲಿ ಕಿಡಿಗೇಡಿತನ ಹಾಗೂ ಅತಿಕ್ರಮಣ ಆರೋಪಗಳಿವೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಬಿಎನ್ಎಸ್ ಅಡಿಯಲ್ಲಿ ಸೆಕ್ಷನ್ಗಳ ಸಂಖ್ಯೆ ಬದಲಾಗಿದ್ದು, ಅದರಂತೆ ದಾಖಲಿಸಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಗೀತಾ ಅರಸ್ ಅವರು ತನ್ನ ಜಮೀನಿನ ಸಂಬಂಧ ಮ್ಯೂಟೆಷನ್ ಮಾಡಿಕೊಡಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿ ಅರ್ಜಿ ಇತ್ಯರ್ಥ ಪಡಿಸಿ ಆದೇಶಿಸಿತ್ತು. ಈ ಸಂಬಂಧ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರೂ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂಧನೆ ಅರ್ಜಿ ಸಲ್ಲಿಸಿದ್ದರು.
ಈ ನಡುವೆ ತಮ್ಮ ಜಮೀನು ವಿವಾದ ಎದುರಾಗಿದ್ದು, ಮತ್ತೊಬ್ಬರ ಜಮೀನಿಗೆ ಅತಿಕ್ರಮಣ ಮತ್ತು ಕಿಡಿಗೇಡಿತನ ಆರೋಪದಲ್ಲಿ ಜುಲೈ 1 ರಂದು ದೂರು ದಾಖಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಐಪಿಸಿ ಅಡಿಯಲ್ಲಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.